ಆಟಿದ ಕೂಟಗಳು ಒಗ್ಗಟ್ಟಿನ ಸಂಕೇತಗಳು: ಶಕುಂತಳಾ ಶೆಟ್ಟಿ

ಪುತ್ತೂರು, ಆ.9: ಆಟಿದ ಕೂಟಗಳು ಅಲ್ಲಲ್ಲಿ ನಡೆಸಲ್ಪಡುತ್ತಿದೆ. ಈ ಕೂಟದ ಉದ್ದೇಶ ಕೇವಲ ವಿಶೇಷ ಅಡುಗೆಯನ್ನು ಮಾಡುವುದು ಮತ್ತು ತಿನ್ನುವುದಕ್ಕೆ ಸೀಮಿತವಲ್ಲ. ಇದೊಂದು ಒಗ್ಗಟ್ಟಿನ ಸಂಕೇತಗಳು. ಈ ಮೂಲಕ ಮಹಿಳೆಯರು ಅನ್ಯಾಯದ ವಿರುದ್ಧ ಸೆಟೆದು ನಿಲ್ಲುವ ಗುಣವನ್ನು ಮೈಗೂಡಿಸಿಕೊಳ್ಳಬೇಕು ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.
ಅವರು ಪುತ್ತೂರು ನಗರಸಭೆಯ ಶಹರಿ ರೋಜ್‌ಗಾರ್ ಯೋಜನೆಯ ಸ್ವರ್ಣೋದಯ ನಿರಂತರ ಉಳಿತಾಯ ಸಂಘಗಳ ಒಕ್ಕೂಟದ ವತಿಯಿಂದ ಬುಧವಾರ ಇಲ್ಲಿನ ಸಮುದಾಯ ಭವನದಲ್ಲಿ ನಡೆದ ‘ಆಟಿ ತಿಂಗೊಳುಡು ಒಂಜಿ ದಿನ’ ಹಾಗೂ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದಿನ ಕಾಲದಲ್ಲಿ ಬಡತನವಿತ್ತು. ಆ ಸಮಯದಲ್ಲಿ ಆಟಿ ತಿಂಗಳಿಗೆ ಸಾಕಷ್ಟು ಗೌರವವಿತ್ತು. ಈಗ ಅದೆಲ್ಲವೂ ನೆನಪು ಮಾತ್ರ ಎಂದ ಅವರು ಆಟಿಯಲ್ಲಿ ಬಹಳ ಮಳೆ ಹೆಚ್ಚಾಗಿದ್ದು, ಹಲವಾರು ರೋಗಳಿಗೆ ಕಾರಣವಾಗುತ್ತಿದೆ. ಆಗ ದೇಹಕ್ಕೆ ಹಲವಾರು ಔಷಧೀಯ ಗುಣಗಳಿರುವ ಪೃಕೃತಿದತ್ತವಾದ ಸೊಪ್ಪು, ಕಣಿಲೆ ಇನ್ನಿತರ ವಸ್ತುಗಳಿಂದ ಹೊಟ್ಟೆ ತುಂಬಿಸಿಕೊಳ್ಳುವ ಜೊತೆಗೆ ಆರೋಗ್ಯವನು್ನ ಕಾಪಾಡಿಕೊಳ್ಳುತ್ತಿದ್ದರು ಎಂದರು.
ಆಟಿಯ ಎಲ್ಲಾ ಆಚರಣೆಗಳಲ್ಲಿ ವೈಜ್ಞಾನಿಕ ದೃಷ್ಠಿಕೋನವಿದೆ. ಆಟಿಯಲ್ಲಿ ಸಂತಾನೋತ್ಪತ್ತಿ ಆದಲ್ಲಿ ಪಗ್ಗು ಅಥವಾ ಬೇಸ ತಿಂಗಳಲ್ಲಿ ಮಕ್ಕಳಾಗುತ್ತದೆ. ಈ ತಿಂಗಳು ಕಡು ಬೇಸಗೆ ಕಾಲವಾಗುವುದರಿಂದ ಸಮಸ್ಯೆಯಾಗುತ್ತದೆ ಎಂದು ಮದುವೆಯಾದ ಹೆಣ್ಣು ಮಕ್ಕಳನ್ನು ತವರು ಮನೆಗೆ ಕರೆಸಿಕೊಳ್ಳುವುದು ವೈಜ್ಞಾನಿಕ ಚಿಂತನೆಯಾಗಿದೆ ಎಂದರು.
ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು ಮಾತನಾಡಿ ಆಟಿ ಆಚರಣೆಯ ಸಂಪ್ರದಾಯವನ್ನು ನಮ್ಮ ಮಕ್ಕಳಿಗೂ ಕಲಿಸಿಕೊಡುವ ಮೂಲಕ ಮುಂದಿನ ಪೀಳಿಗೆ ಉಳಿಸಿಕೊಡಬೇಕು ಎಂದು ಹೇಳಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಮೇಲ್ವಿಚಾರಕಿ ಜಲಜಾಕ್ಷಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಸಮಾರಂಭದಲ್ಲಿ ನಗರಸಭೆಯ ಉಪಾಧ್ಯಕ್ಷ ವಿಶ್ವನಾಥ ಗೌಡ, ಪೌರಾಯುಕ್ತೆ ರೂಪಾ ಶೆಟ್ಟಿ, ಸದಸ್ಯರಾದ ಜೀವಂಧರ್ ಜೈನ್, ಜಯಲಕ್ಷ್ಮೀ, ಸ್ವರ್ಣೋದಯ ನಿರಂತರ ಉಳಿತಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಯಮುನಾ, ಉಪಾಧ್ಯಕ್ಷೆ ಪುಷ್ಪಾವತಿ ಮತ್ತಿತರರು ಉಪಸ್ಥಿತರಿದ್ದರು. ಶಹಿರಿ ರೋಜ್‌ಗಾರ್ ಯೋಜನೆಯ ಸಮುದಾಯ ಸಂಘಟಕ ಉಸ್ಮಾನ್ ಬೊಳುವಾರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಒಕ್ಕೂಟದ ಸದಸ್ಯರಾದ ಭಾಗೀಥಿ ವಂದಿಸಿದರು. ಲತಾ ನಿರೂಪಿಸಿದರು.







