ಪ್ರತಿಭೆಗಳು ವೇದಿಕೆಯಲ್ಲೇ ಅರಳುತ್ತವೆ: ಮೀನಾಕ್ಷಿ ಶಾಂತಿಗೋಡು
ಸಂಗೀತ ಕಲಾಕೇಂದ್ರದ ವಾರ್ಷಿಕೋತ್ಸವ

ಪುತ್ತೂರು, ಆ. 9: ಪ್ರತಿಭೆಗಳನ್ನು ಬೆಳೆಸಲು ಅವಕಾಶಗಳ ಅಗತ್ಯವಿದೆ. ಪ್ರತಿಯೊಬ್ಬನಲ್ಲೂ ತನ್ನದೇ ಆದ ವಿಶೇಷ ಪ್ರತಿಭೆ ಸುಪ್ತವಾಗಿರುತ್ತದೆ, ಆದರೆ ಅದನ್ನು ಹೊರಗೆಡವಲು ಸೂಕ್ತ ವೇದಿಕೆಯ ಆವಶ್ಯಕತೆ ಇದೆ. ಪ್ರತಿಭೆಗಳಿಗೆ ಪ್ರೋತ್ಸಾಹ ಹಾಗೂ ಸೂಕ್ತ ಮಾರ್ಗದರ್ಶನ ದೊರೆತರೆ ಸಾಧನೆ ಮಾಡಬಹುದು ಎಂದು ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹೇಳಿದರು.
ಅವರು ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಸಭಾಭವನದಲ್ಲಿ ಪುರುಷರಕಟ್ಟೆ ಗುರುಕುಲ ಸಂಗೀತ ಕಲಾಕೇಂದ್ರದ ವಾರ್ಷಿಕೋತ್ಸವದ ಅಂಗವಾಗಿ ಬುಧವಾರ ನಡೆದ ಸಂಗೀತ ರಸಸಂಜೆ , ಸಾಧಕರಿಗೆ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪುತ್ತೂರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಸಂಸ್ಕಾರ, ಆಚಾರ ವಿಚಾರಗಳನ್ನು ಮೈಗೂಡಿಸಿಕೊಂಡು ಸುಮಾರು ನೂರಕ್ಕಿಂತಲೂ ಹೆಚ್ಚು ಮಕ್ಕಳಿಗೆ ಗುರುಕುಲ ಪದ್ದತಿಯಲ್ಲಿ ಸಂಗೀತಾಭ್ಯಾಸ ನೀಡುತ್ತಿರುವ ಗುರುಪ್ರಿಯಾ ನಾಯಕ್ ಅವರ ಕಾರ್ಯವನ್ನು ಶ್ಲಾಘಿಸಿದರು.
ಖ್ಯಾತ ಕೊಳಲು ಹಾಗೂ ಗಿಟಾರ್ ವಾದಕ ಯತೀಶ್ ಮಂಗಳೂರು, ಅಂತರ್ರಾಷ್ಟ್ರೀಯ ಖ್ಯಾತ ಸಂಗೀತ ಕಲಾವಿದ ಗುರುರಾಜ್ ಎಂ.ವಿ. ನರಿಮೊಗರು ಗ್ರಾ.ಪಂ.ನ ಅಧ್ಯಕ್ಷೆ ಚಂದ್ರಕಲಾ ಎಂ , ಪುತ್ತೂರು ರೋಟರಿಕ್ಲಬ್ ಪೂರ್ವ ಇದರ ಅಧ್ಯಕ್ಷ ಜಯಂತ ನಡುಬೈಲು ,ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ,ಕೈಪಂಗಳ ಬ್ರಹ್ಮಬೈದರ್ಕಳ ಗರಡಿಯ ಅಧ್ಯಕ್ಷ ವೇದನಾಥ ಸುವರ್ಣ ಶುಭಹಾರೈಸಿದರು.
ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮಹೇಶ್ಚಂದ್ರ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಝೀ ಕನ್ನಡ ಸರಿಗಮಪ ಪ್ರತಿಭೆ ಕು.ಲಹರಿ ಕೋಟ್ಯಾನ್ ,ರಾಷ್ಟ್ರೀಯ ಖೋಖೋ ಆಟಗಾರ್ತಿ ಕು.ಚೈತ್ರಾ ಎಸ್ , ರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಕು.ದೀಕ್ಷಿತಾ, ಭರತನಾಟ್ಯ ತರಬೇತುದಾರ ವಿದ್ವಾನ್ ಗೋಪಾಲಕೃಷ್ಣ ವೀರಮಂಗಲ ಇವರನ್ನು ಸಮ್ಮಾನಿಸಲಾಯಿತು ಮತ್ತು ಜಿಲ್ಲಾ ಯುವಪ್ರಶಸ್ತಿ ಪುರಸ್ಕೃತ ಸುಬ್ರಹ್ಮಣ್ಯ ಕರುಂಬಾರು ಹಾಗೂ ಪತ್ರಕರ್ತ ಪ್ರವೀಣ್ ಚೆನ್ನಾವರ ಅವರನ್ನು ಗುರುಕುಲ ಸಂಗೀತ ಕಲಾ ಶಾಲೆಯ ವತಿಯಿಂದ ಅಭಿನಂದಿಸಲಾಯಿತು.
ಸಂಗೀತ ಶಿಕ್ಷಕಿ ಗುರುಪ್ರಿಯಾ ನಾಯಕ್ ಅವರನ್ನು ಶಿಷ್ಯವೃಂದದ ವತಿಯಿಂದ ಅವರ ಪೋಷಕರು ಗೌರವಿಸಿ, ಗುರುವಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಗುರುಕುಲ ಸಂಗೀತ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಿತು.
ಗುರುಕುಲ ಸಂಗೀತ ಕಲಾ ಶಾಲೆಯ ಸಂಚಾಲಕಿ ಗುರುಪ್ರಿಯಾ ನಾಯಕ್ ಸ್ವಾಗತಿಸಿ ,ಪೂಜಾ ವಸಂತ್ ವಂದಿಸಿದರು.ಶಶಿಧರ್ ಕಿನ್ನಿಮಜಲು ಕಾರ್ಯಕ್ರಮ ನಿರೂಪಿಸಿದರು.







