ಪ್ರಜಾಪ್ರಭುತ್ವದ ಮೇಲೆ ಕೋಮುವಾದಿ,ದಮನಕಾರಿ ಶಕ್ತಿಗಳ ದಾಳಿ:ಸೋನಿಯಾ

ಹೊಸದಿಲ್ಲಿ,ಆ.9: ದೇಶದಲ್ಲಿಂದು ಕೋಮುವಾದಿ ಮತ್ತು ದಮನಕಾರಿ ಶಕ್ತಿಗಳಿಂದ ಪ್ರಜಾಪ್ರಭುತ್ವದ ಮೇಲೆ ದಾಳಿಗಳು ನಡೆಯುತ್ತಿವೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಬುಧವಾರ ಕಳವಳಗಳನ್ನು ವ್ಯಕ್ತಪಡಿಸಿದರು.
ಚಲೇಜಾವ್ ಚಳವಳಿಯ 75ನೆಯ ವರ್ಷಾಚರಣೆಯ ಅಂಗವಾಗಿ ಲೋಕಸಭೆಯ ವಿಶೇಷ ಅಧಿವೇಶನದಲ್ಲಿ ಮಾತನಾಡುತ್ತಿದ್ದ ಅವರು, ನಾವಿಂದು ಈ ಸಂದರ್ಭವನ್ನು ಆಚರಿಸುತ್ತಿರುವಾಗ,ಭಯದ ಕರಿನೆರಳು ಸ್ವಾತಂತ್ರವನ್ನು ಆವರಿಸುತ್ತಿದೆಯೇ, ಪ್ರಜಾಪ್ರಭುತ್ವದ ಸ್ವರೂಪ ಜೊತೆಗೆ ಅಭಿವ್ಯಕ್ತಿ ಸ್ವಾತಂತ್ರ, ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ವಿನಾಶಗೊಳಿಸುವ ಪ್ರಯತ್ನಗಳು ನಡೆಯುತ್ತಿವೆಯೇ ಎಂಬ ಶಂಕೆಗಳು ಜನರನ್ನು ಕಾಡುತ್ತಿವೆ ಎಂದರು.
ವಿಭಾಜಕ, ಕೋಮುವಾದಿ ಮತ್ತು ಸಂಕುಚಿತ ಮನಸ್ಸಿನ ಸಿದ್ಧಾಂತಗಳಿಗೆ ನಾವು ನಮ್ಮನ್ನು ಕೈದಿಗಳನ್ನಾಗಿಸಿಕೊಳ್ಳುವಂತಿಲ್ಲ ಎನ್ನುವುದನ್ನು ಚಲೇಜಾವ್ ಚಳವಳಿಯು ನಮಗೆ ನೆನಪಿಸು ತ್ತದೆ. ಹಾಗೆ ಆಗಲು ನಾವು ಬಿಡುವದೂ ಇಲ್ಲ ಎಂದರು.
ಇಂದು ಜಾತ್ಯತೀತತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ ಅಪಾಯದಲ್ಲಿರುವಂತೆ ಕಂಡು ಬರುತ್ತಿದೆ. ಸ್ವಾತಂತ್ರವನ್ನು ರಕ್ಷಿಸಿಕೊಳ್ಳಬೇಕಾದರೆ ಅದನ್ನು ಅಪಾಯದಲ್ಲಿ ತಳ್ಳುತ್ತಿರುವ ಶಕ್ತಿಗಳನ್ನು ನಾವು ಸೋಲಿಸಬೇಕು. ವಿಭಾಜಕ ಶಕ್ತಿಗಳು ಯಶಸ್ವಿಯಾಗಲು ನಾವು ಅವಕಾಶ ನೀಡುವುದಿಲ್ಲ ಎಂದರು.
ತನ್ನ ಭಾಷಣದುದ್ದಕ್ಕೂ ಸೋನಿಯಾ ಯಾವುದೇ ಪಕ್ಷ ಅಥವಾ ನಾಯಕನನ್ನು ಹೆಸರಿಸದಿದ್ದರೂ ಆರೆಸ್ಸೆಸ್ ಮತ್ತು ಬಿಜೆಪಿ ಅವರ ದಾಳಿಯ ಗುರಿಯಾಗಿರುವಂತೆ ಕಂಡು ಬಂದಿತ್ತು.
ಕೆಲವು ಸಂಘಟನೆಗಳು ಚಲೇಜಾವ್ ಚಳವಳಿಯನ್ನು ವಿರೋಧಿಸಿದ್ದವು ಎನ್ನುವುದನ್ನು ನಾವು ಮರೆಯಕೂಡದು. ಇಂತಹ ಸಂಘಟನೆಗಳಿಗೆ ಸ್ವಾತಂತ್ರ ಹೋರಾಟದಲ್ಲಿ ಯಾವುದೇ ಪಾತ್ರವಿಲ್ಲ ಎಂದರು.
ದೇಶದಲ್ಲಿಯ ಪ್ರಚಲಿತ ಸನ್ನಿವೇಶವನ್ನು ಉಲ್ಲೇಖಿಸಿದ ಅವರು, ‘‘ನಫ್ರತ್ ಔರ್ ಬದ್ಲೆ ಕಿ ರಾಜನೀತಿ ಕೆ ಬಾದಲ್ ಛಾ ಗಯೆ ಹೈಂ, ಪಬ್ಲಿಕ್ ಪ್ಲೇಸ್ ಮೆ ಬೆಹೆಸ್ ಕೀ ಗುಂಜಾಯಿಷ್ ಕಮ್ ಹೋ ರಹಾ ಹೈ(ದ್ವೇಷ ಮತ್ತು ಪ್ರತೀಕಾರ ರಾಜಕೀಯದ ಕಾರ್ಮೋಡ ದೇಶವನ್ನು ಆವರಿಸಿದೆ, ಸಾರ್ವಜನಿಕ ಸ್ಥಳಗಳಲ್ಲಿ ಚರ್ಚೆಗಳಿಗೆ ಅವಕಾಶ ಕಡಿಮೆಯಾಗುತ್ತಿದೆ) ಎಂದರು.
ಸ್ವಾತಂತ್ರ ಹೋರಾಟದ ಸಂದರ್ಭ ಹಲವಾರು ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದ ಪಂಡಿತ ಜವಾಹರಲಾಲ ನೆಹರು ಅವರನ್ನು ಉಲ್ಲೇಖಿಸುವ ಮೂಲಕ ತನ್ನ ಭಾಷಣ ಆರಂಭಿಸಿದ್ದ ಸೋನಿಯಾ ‘ಭಾರತ ಬಿಟ್ಟು ತೊಲಗಿ’ ಆಂದೋಲನದಲ್ಲಿ ಭಾಗಿಯಾಗಿದ್ದ ಮತ್ತು ಸ್ವಾತಂತ್ರ ಹೋರಾಟಕ್ಕಾಗಿ ಬಲಿದಾನವನ್ನು ಮಾಡಿದ್ದ ಕಾಂಗ್ರೆಸ್ ಕಾರ್ಯಕರ್ತ ರಿಗೆ ಶ್ರದ್ಧಾಂಜಲಿಗಳನ್ನು ಸಲ್ಲಿಸಿದರು.







