‘ಗ್ರಹಣ’ ಬಿಟ್ಟು ಹೋಗಿದೆ: ಡಿ.ಕೆ.ಶಿವಕುಮಾರ್

ಬೆಂಗಳೂರು, ಆ.9: ಕೆಲ ದಿನಗಳ ಹಿಂದೆ ನಮಗೆ ಗ್ರಹಣ ಹಿಡಿದಿತ್ತು. ಆದರೆ, ಅದು ಈಗ ಬಿಟ್ಟು ಹೋಗಿದೆ. ಆ ಸಂದರ್ಭದಲ್ಲಿ ಏನೇನು ನಡೆಯಿತು, ಯಾವ ಯಾವ ಆಪರೇಷನ್ ನಡೆದಿದೆ ಎಲ್ಲವೂ ನನಗೆ ಗೊತ್ತಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್, ಪರೋಕ್ಷವಾಗಿ ಗುಜರಾತ್ ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನಡೆದುಕೊಂಡು ರೀತಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಕೆಪಿಸಿಸಿ ವತಿಯಿಂದ ಕ್ವಿಟ್ ಇಂಡಿಯಾ ಚಳವಳಿಯ 75ನೆ ವರ್ಷಾಚರಣೆ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಆ ವಿಚಾರವನ್ನು ಈ ವೇದಿಕೆಯಲ್ಲಿ ಮಾತನಾಡುವುದಿಲ್ಲ ಎಂದರು.
ತ್ಯಾಗಕ್ಕೆ ಮತ್ತೊಂದು ಹೆಸರೇ ಕಾಂಗ್ರೆಸ್. ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿಗೆ ಪ್ರಧಾನಿಯಾಗುವ ಅವಕಾಶ ಬಂದಾಗಲೂ ಆಗಲಿಲ್ಲ. ಅದರ ಬದಲು ಸಿಖ್ಖ್ ಸಮುದಾಯದ ಡಾ.ಎಂ.ಮನಮೋಹನ್‌ಸಿಂಗ್‌ರನ್ನು ಪ್ರಧಾನಿ ಮಾಡಿದರು ಎಂದು ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಗುಜರಾತಿನ ಮಹಿಳಾ ಶಾಸಕಿಯರು ನನಗೆ ಮತ್ತು ನನ್ನ ಸಹೋದರನಿಗೆ ರಕ್ಷಾಬಂಧನದ ಪ್ರಯುಕ್ತ ರಾಕಿ ಕಟ್ಟಿದರು. ಬಳಿಕ ರಾಜ್ಯಸಭೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿದರು. ಮಳೆ ಬರುತ್ತೆ ನಿಲ್ಲುತ್ತೆ, ಇದು ಪ್ರಕೃತಿಯ ನಿಯಮ. ನಾನು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಸೋನಿಯಾಗಾಂಧಿ, ಮುಖ್ಯಮಂತ್ರಿ ಸೇರಿದಂತೆ ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ಧೈರ್ಯ ತುಂಬಿದ್ದಕ್ಕೆ ಅವರು ಅಭಿನಂದನೆ ಸಲ್ಲಿಸಿದರು. 1985ರಲ್ಲೆ ಚುನಾವಣೆ ಎದುರಿಸಿದ್ದೇನೆ. ಸಚಿವ ಸ್ಥಾನ ಬರುತ್ತೆ ಹೋಗುತ್ತೆ, ಅದನ್ನು ಶಾಶ್ವತ ಅಂದುಕೊಂಡಿಲ್ಲ. ಬಂಗಾರಪ್ಪ ಕಾಲದಲ್ಲೆ ಸಚಿವನಾದವನು ನಾನು. ರಾಜ್ಯದಲ್ಲಿ ನಮ್ಮ ಸರಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.ಗುಜರಾತಿನಲ್ಲಿ ಸೋಲಿನ ಭೀತಿಯಿಂದ ನಮ್ಮ ಶಾಸಕರನ್ನು ಸೆಳೆಯೋ ಪ್ರಯತ್ನ ಮಾಡಲಾಗಿತ್ತು. ಆದರೂ, ಬಿಜೆಪಿಯವರು ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಯಾರು ಹೇಗಾದರೂ ನಮ್ಮನ್ನು ಬಿಂಬಿಸಲಿ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಕಾರ್ಯಕರ್ತರಿಗೆ ಶಿವಕುಮಾರ್ ಕರೆ ನೀಡಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ಮಾತನಾಡಿ, ಬಿಜೆಪಿಯವರದ್ದು ಢೋಂಗಿ ದೇಶಭಕ್ತಿ. ಕ್ವಿಟ್ ಇಂಡಿಯಾ ಚಳವಳಿಯನ್ನು ವಿರೋಧಿಸಿದ್ದರು. ದೇಶವನ್ನು ವಿಭಜಿಸಿದ ಮುಹಮ್ಮದ್ ಅಲಿ ಜಿನ್ನಾಗೆ ಅಂದು ಬಿಜೆಪಿಯವರು ಬೆಂಬಲ ನೀಡಿದರು ಎಂದು ಕಿಡಿಗಾರಿದರು. ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ವಾಹನದ ಮೇಲೆ ಕಲ್ಲು ಎಸೆಯುತ್ತಾರೆ. ರಾಜ್ಯಸಭಾ ಚುನಾವಣೆಯಲ್ಲಿ ಅಹ್ಮದ್‌ಪಟೇಲ್‌ರನ್ನು ಸೋಲಿಸಲು ಸಾವಿರಾರು ಕುತಂತ್ರ ಮಾಡುತ್ತಾರೆ. ಇವರಿಗೆ ದೇಶದ ಅಭಿವೃದ್ಧಿ ಬೇಕಿಲ್ಲ. ಮಹಾತ್ಮಗಾಂಧಿಯನ್ನು ಕೊಲೆ ಮಾಡಿದವರು ಇವರು ಎಂದು ದಿನೇಶ್‌ಗುಂಡೂರಾವ್ ಆರೋಪಿಸಿದರು.
ಕೇಂದ್ರ ಸರಕಾರವು ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಮೇಲೆ ನಡೆದಿರುವ ಆದಾಯ ತೆರಿಗೆ ಇಲಾಖೆ ದಾಳಿಯೂ ಇದಕ್ಕೆ ನಿದರ್ಶನ. ಇಂತಹ ಸರಕಾರದ ವಿರುದ್ಧ ನಾವು ಹೋರಾಟ ಮಾಡಲೇಬೇಕು. ಗುಜರಾತಿನಿಂದಲೆ ಬಿಜೆಪಿಯ ಅಧಃಪತನ ಆರಂಭವಾಗಿದೆ ಎಂದು ಅವರು ಹೇಳಿದರು.







