ಈ ವರ್ಷ ಕೋಮು ಘಟನೆಗಳಲ್ಲಿ ಉತ್ತರ ಪ್ರದೇಶ ಮೊದಲನೆ ಸ್ಥಾನದಲ್ಲಿ

ಹೊಸದಿಲ್ಲಿ,ಆ.9: ಈ ವರ್ಷದ ಜನವರಿಯಿಂದ ಮೇವರೆಗಿನ ಅವಧಿಯಲ್ಲಿ ದೇಶದಲ್ಲಿ ಅತಿಹೆಚ್ಚು ಕೋಮು ಘಟನೆಗಳು ಉತ್ತರ ಪ್ರದೇಶ ಮತ್ತು ಕರ್ನಾಟಕದಲ್ಲಿ ನಡೆದಿವೆ ಎಂದು ಲೋಕಸಭೆಗೆ ಸಲ್ಲಿಸಲಾಗಿರುವ ಅಂಕಿಅಂಶಗಳು ಬೆಟ್ಟು ಮಾಡಿವೆ.
ಈ ಅವಧಿಯಲ್ಲಿ ದೇಶಾದ್ಯಂತ 296 ಕೋಮು ಘಟನೆಗಳು ಸಂಭವಿಸಿದ್ದು, ಇವುಗಳಲ್ಲಿ 44 ಜನರು ಕೊಲ್ಲಲ್ಪಟ್ಟಿದ್ದಾರೆ ಮತ್ತು 892ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಉ.ಪ್ರದೇಶವೊಂದರಲ್ಲಿಯೇ 60 ಘಟನೆಗಳು ವರದಿಯಾಗಿದ್ದು, ಅಲ್ಲಿ 16 ಜೀವಗಳು ಬಲಿಯಾಗಿವೆ ಮತ್ತು 151 ಜನರು ಗಾಯಗೊಂಡಿದ್ದಾರೆ. ಎರಡನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ 36 ಕೋಮುಘಟನೆಗಳಲ್ಲಿ ಮೂವರು ಕೊಲ್ಲಲ್ಪಟ್ಟಿದ್ದು, 93 ಜನರು ಗಾಯಗೊಂಡಿದ್ದಾರೆ.
ಮಧ್ಯಪ್ರದೇಶ(29), ರಾಜಸ್ಥಾನ(27), ಪ.ಬಂಗಾಳ(26), ಬಿಹಾರ(23), ಗುಜರಾತ್ ಮತ್ತು ಮಹಾರಾಷ್ಟ್ರ(ತಲಾ 20) ಹೆಚ್ಚು ಸಂಖ್ಯೆಯಲ್ಲಿ ಕೋಮು ಘಟನೆಗಳು ಸಂಭವಿಸಿರುವ ಇತರ ರಾಜ್ಯಗಳಾಗಿವೆ.
ದೇಶದಲ್ಲಿ 2016ರಲ್ಲಿ 703 ಮತ್ತು 2015ರಲ್ಲಿ 751 ಕೋಮು ಘಟನೆಗಳು ನಡೆದಿದ್ದು, ಈ ಎರಡು ವರ್ಷಗಳಲ್ಲಿಯೂ ಉ.ಪ್ರದೇಶ ಮತ್ತು ಕರ್ನಾಟಕ ಅಗ್ರಸ್ಥಾನಗಳಲ್ಲಿದ್ದವು. 2016ರಲ್ಲಿ ಉ.ಪ್ರದೇಶದಲ್ಲಿ 162 ಮತ್ತು ಕರ್ನಾಟಕದಲ್ಲಿ 101 ಕೋಮು ಘಟನೆಗಳು ನಡೆದಿದ್ದರೆ, 2015ರಲ್ಲಿ ಇವು ಅನುಕ್ರಮವಾಗಿ 155 ಮತ್ತು 105 ಆಗಿದ್ದವು.
2015ರಲ್ಲಿ ಅತ್ಯಂತ ಹೆಚ್ಚಿನ(97) ಸಾವುಗಳು ಸಂಭವಿಸಿದ್ದರೆ, 2014ರಲ್ಲಿ 95 ಮತ್ತು 2016ರಲ್ಲಿ 86 ಸಾವುಗಳು ಸಂಭವಿಸಿವೆ. ಕಳೆದ ವರ್ಷ 2,321 ಜನರು ಗಾಯ ಗೊಂಡಿದ್ದು, ಇದು ಹಿಂದಿನೆರಡು ವರ್ಷಗಳಿಗೆ ಹೋಲಿಸಿದರೆ ಅತ್ಯಂತ ಹೆಚ್ಚಾಗಿದೆ ಎಂದೂ ಅಂಕಿಅಂಶಗಳು ತಿಳಿಸಿವೆ.







