ನಾಳೆಯಿಂದ ನಾಲೆಗಳಿಗೆ ಹೇಮಾವತಿ ನೀರು: ಸಚಿವ ಟಿ.ಬಿ.ಜಯಚಂದ್ರ

ತುಮಕೂರು,ಆ.9: ತುಮಕೂರು ಜಿಲ್ಲೆಗೆ ಹೇಮಾವತಿ ಅಣೆಕಟ್ಟೆಯಿಂದ ಕುಡಿಯುವ ನೀರಿನ ಬರ ನೀಗಿಸಲು ನಾಳೆಯಿಂದ ನಾಲೆಗಳಿಗೆ ನೀರು ಹರಿಸುವಂತೆ ಮುಖ್ಯಮಂತ್ರಿಗಳ ಕಛೇರಿಯಿಂದ ಆದೇಶಿಸಲಾಗಿದೆ ಎಂದು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಸಣ್ಣ ನೀರಾವರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಪ್ರಥಮ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ವಾತನಾಡುತಿದ್ದ ಅವರು, ಜಿಲ್ಲೆಯಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಬರ ಪರಿಸ್ಥಿತಿಯಿದ್ದು, ಕುಡಿಯುವ ನೀರಿಗೂ ಕಷ್ಟ ಪಡುತ್ತಿರುವ ಇಂದಿನ ದಿನಗಳಲ್ಲಿ ಜಿಲ್ಲೆಯ ಜನರಿಗೆ ಹೇಮಾವತಿಯಿಂದ ನೀರನ್ನು ನೀಡಲು ಸರಕಾರ ಮುಂದಾಗಿದ್ದು, ಈ ದಿಸೆಯಲ್ಲಿ ನೀರಾವರಿ ಇಲಾಖೆಯವರು ನೀರನ್ನು ಯಾವುದೇ ಪಕ್ಷಪಾತಗಳಿಲ್ಲದೆ ಎಲ್ಲರಿಗೂ ಸಮನಾಗಿ ಹಂಚಿಕೆಯಾಗುವಂತೆ ಕ್ರಮ ವಹಿಸಬೇಕೆಂದು ನೀರಾವರಿ ಇಲಾಖೆಯ ಅಧೀಕ್ಷಕ ಇಂಜಿನಿಯರ್ ಶಿವಕುಮಾರ್ ಅವರಿಗೆ ಸೂಚಿಸಿದರು.
ನಾಳೆಯಿಂದ ನಾಲೆಗಳಿಗೆ ಹರಿಸುತ್ತಿರುವ ನೀರನ್ನು ಜನ ಮತ್ತು ಜಾನುವಾರುಗಳ ಉಪಯೋಗಕ್ಕೆ ಮಾತ್ರ ಪಡಿತರ ಮಾದರಿಯಲ್ಲಿ ಬಳಸುವಂತೆ ವಿನಂತಿಸಿದ ಸಚಿವರು, ಯಾವುದೇ ಕಾರಣಕ್ಕೂ ಭತ್ತ ಇನ್ನಿತರೆ ಬೆಳೆಗಳಿಗೆ ನೀರನ್ನು ನಾಲೆಗಳಿಂದ ಅನಧಿಕೃತವಾಗಿ ಪಡೆಯದಂತೆ ಜನರಲ್ಲಿ ವಿನಂತಿಸಿದರು. ಜಿಲ್ಲೆಯಲ್ಲಿ 8-8-2017ರವರೆಗೂ 2626 ಶಂಕಿತ ಡೆಂಗ್ ಪೀಡಿತ ಜನರ ರಕ್ತ ಪರೀಕ್ಷೆ ಮಾಡಲಾಗಿದ್ದು, 295 ಪ್ರಕರಣಗಳು ಡೆಂಗ್ ಎಂದು ದೃಢಪಟ್ಟಿದ್ದು,15 ಜನ ಶಂಕಿತ ಡೆಂಗ್ ಮೃತಪಟ್ಟಿದ್ದು, ಇವರಲ್ಲಿ 6 ಪ್ರಕರಣಗಳು ಮಾತ್ರ ಡೆಂಗ್ಯೂವಿನಿಂದಲೇ ಮೃತಪಟ್ಟಿರುವುದಾಗಿ ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ರಂಗಸ್ವಾಮಿ ಅವರು ಸಚಿವರಿಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 49,100 ಹೆಕ್ಟೇರ್‌ನಲ್ಲಿ ತೆಂಗು ಹಾಗೂ 12,090 ಅಡಿಕೆ ಮರಗಳು ನೀರಿನ ಕೊರತೆಯಿಂದ ಹಾಳಾಗಿದ್ದು, ರಾಜ್ಯದ 13 ಜಿಲ್ಲೆಗಳಲ್ಲಿ 2.5ಕೋಟಿ ತೆಂಗಿನ ಮರಗಳು ನಾಶ ಹೊಂದಿದ್ದು, ರೈತರಿಗೆ ತುಂಬಲಾರದ ನಷ್ಟ ಉಂಟಾಗಿರುವು ದರಿಂದ ಈ ಬಗ್ಗೆ ರೈತರಿಗೆ ಪರಿಹಾರ ಕಲ್ಪಿಸಲು ಕೇಂದ್ರ ಸರಕಾರದ ನೆರವನ್ನು ಯಾಚಿಸಲು ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರದ ವತಿಯಿಂದ ಪತ್ರ ಬರೆಯಲಾಗುವುದು ಎಂದು ಮಾನ್ಯ ಸಚಿವರು ತಿಳಿಸಿದರು.
ಕಳೆದ ವರ್ಷದ ಬರಪರಿಸ್ಥಿತಿ ಎದುರಿಸುವಲ್ಲಿ ಜಿಲ್ಲಾಡಳಿತ ರಾಜ್ಯ ಸರಕಾರದ ನೆರವಿನಿಂದ ಸುಮಾರು 34 ಕೋಟಿ ರೂ.ಗಳನ್ನು ಜಾನುವಾರುಗಳ ಮೇವಿಗಾಗಿ ಹಾಗೂ ಗೋಶಾಲೆಗಳ ನಿರ್ವಹಣೆಗೆ ವೆಚ್ಚ ಮಾಡಿದ್ದು, ಇದರಲ್ಲಿ ಇನ್ನೂ 11 ಕೋಟಿ ರೂ.ಗಳು ಪಾವತಿಗೆ ಬಾಕಿ ಉಳಿದಿದೆ ಎಂದು ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಅವರು ಸಭೆಗೆ ತಿಳಿಸಿದರು.
ಜಿಲ್ಲೆಯಲ್ಲಿ ಮುಂಗಾರು ಮಳೆಯ ಕೊರತೆಯಿಂದಾಗಿ ಈ ವರ್ಷವೂ ಸಹ ಭೀಕರ ಬರಗಾಲ ಎದುರಾಗಲಿದೆ ಎಂದು ತಿಳಿಸಿದ ಸಚಿವರು, ರೈತರಿಗೆ ಬೆಳೆ ವಿಮೆ ಮತ್ತು ಬೆಳೆ ನಷ್ಟ ಪರಿಹಾರಗಳು ರಾಜ್ಯ ಮತ್ತು ಕೇಂದ್ರ ಸರಕಾ ರಗಳಿಂದ ಬಿಡುಗಡೆಯಾಗಿ ರೈತರ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುತ್ತಿದೆ, ಆದರೆ ಕೆಲವು ರಾಷ್ಟ್ರೀಕೃತ ಬ್ಯಾಂಕ್‌ಗಳು ತಮ್ಮಲ್ಲಿ ಖಾತೆ ಹೊಂದಿರುವ ರೈತರ ಪರಿಹಾರ ಧನವನ್ನು ಅವರ ಸಾಲಗಳಿಗೆ ಸರಿಹೊಂದಿಸುವ ಮೂಲಕ ರೈತರಿಗೆ ತೊಂದರೆ ಕೊಡುತ್ತಿರುವುದರ ಬಗ್ಗೆ ಲೀಡ್ ಬ್ಯಾಂಕ್ ಮ್ಯಾನೇಜರ್ ಜ್ಯೋತಿಗಣೇಶ್ ರವರಿಗೆ ಈ ಬಗ್ಗೆ ಯಾವೊಬ್ಬ ರೈತರಿಗೂ ಅನ್ಯಾಯವಾಗದಂತೆ ಎಲ್ಲಾ ಪರಿಹಾರ ಹಣವನ್ನು ರೈತರಿಗೆ ಪಾವತಿಸಲು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಶಾಸಕರಾದ ಸುರೇಶ್‌ಗೌಡ, ಎಂ.ಟಿ.ಕೃಷ್ಣಪ್ಪ, ಶ್ರೀನಿವಾಸ್, ಷಡಾಕ್ಷರಿ, ತಿಮ್ಮರಾಯಪ್ಪ, ವಿಧಾನಪರಿಷತ್ ಸದಸ್ಯರಾದ ರಮೇಶ್ ಬಾಬು, ಬೆಮೆಲ್ ಕಾಂತರಾಜು, ನಾಮನಿರ್ದೇಶಿತ ಸದಸ್ಯರಾದ ದೇವೇಗೌಡ, ಕೃಷ್ಣಯ್ಯ, ದಿನೇಶ್ ಮುಂತಾದವರು ಸೇರಿದಂತೆ ಜಿಲ್ಲಾ ಪಂಚಾಯತ್ ಸಿಇಓ ಕೆ.ಜಿ.ಶಾಂತಾರಾಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.







