ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸ್ಪಂದಿಸಿ ಚಿಕಿತ್ಸೆ ನೀಡಲು ವೈದ್ಯರಿಗೆ ಸೂಚನೆ

ಹಾಸನ, ಆಗಸ್ಟ್ 9: ತಾಲ್ಲೂಕು ಆರೊಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಬರುವ ರೋಗಿಗಳೊಂದಿಗೆ ಸೌಜನ್ಯದಿಂದ ನಡೆದುಕೊಳ್ಳುವುದರ ಜೊತೆಗೆ ಅವರಿಗೆ ಸ್ಪಂಧಿಸಿ ಚಿಕಿತ್ಸೆ ನೀಡುವಂತೆ ವೈದ್ಯರು ಮತ್ತು ಸಿಬ್ಬಂಧಿಗಳಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿಯವರ ಕಚೇರಿ ಸಬಾಂಗಣದಲ್ಲಿಂದು ನಡೆದ ಜಿಲ್ಲಾ ಆರೋಗ್ಯ ಅಭಿಯಾನ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರಿ ಆಸ್ಪತ್ರೆಗಳಿಗೆ ಇನ್ನೂ ಮುಂದೆ ಅನೀರೀಕ್ಷಿತವಾಗಿ ವಿಜಿಲೆನ್ಸ್ ತಂಡವು ಭೇಟಿ ನೀಡಲಿದೆ. ಯಾವುದೆ ದೂರುಗಳು ಬಂದಲ್ಲಿ ಅಂತಹವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಯವರು ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳಿಗೆ ಎಚ್ಚರಿಗೆ ನೀಡಿದರು.
ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಔಷಧಿಗಳನ್ನು ಹೊರಗಿನಿಂದ ತರಲು ಚೀಟಿ ಬರೆದುಕೊಡದಂತೆ ವೈದ್ಯರಿಗೆ ನಿರ್ದೇಶನ ನೀಡಿದ ಅವರು, ಗರ್ಭಿಣಿ ಸ್ತ್ರೀಯರಿಗೆ ಆರೊಗ್ಯ ಕುರಿತು ಅರಿವು ಮೂಡಿಸಲು ಸಚಿತ್ರದೊಂದಿಗೆ ಮಾಹಿತಿಯನ್ನು ಆಸ್ಪತ್ರೆಗಳಲ್ಲಿ ಪ್ರಕಟಗೊಳಿಸುವಂತೆ ತಿಳಿಸಿದರಲ್ಲದೆ, ಆರೋಗ್ಯ ಸಹಾಯಕಿಯರು ಗರ್ಭಿಣಿ ಸ್ತ್ರೀಯರ ಮನೆಗಳಿಗೆ ಬೇಟಿ ನೀಡಿದ ಸಂದರ್ಭದಲ್ಲಿ ನಿಗದಿತ ಸಮಯಕ್ಕೆ ಚುಚ್ಚು ಮದ್ದು ಹಾಕಿಸುವುದು ಜೊತೆಗೆ ಅಗತ್ಯ ಮಾತ್ರೆ ಸೇವೆ ಬಗ್ಗೆ ತಿಳುವಳಿಕೆ ಮೂಡಿಸುವಂತೆ ಸೂಚಿಸಿದರು.
ಗರ್ಭಿಣಿಯರು ರಕ್ತ ಹೀನತೆಯಿಂದ ಮುಕ್ತರಾಗಲು ವೈದ್ಯರು ಸೂಚಿಸಿದ ಮಾತ್ರೆಗಳನ್ನು ಕಡ್ಡಾಯವಾಗಿ ಸೇವನೆ ಮಾಡುವಂತೆ ಅರಿವು ಮೂಡಿಸಲು ಆರೋಗ್ಯ ಸಹಾಯಕಿಯರಿಗೆ ಸೂಚಿಸಿದ ಜಿಲ್ಲಾಧಿಕಾರಿ ಅವರು, ಗರ್ಭಿಣಿಯರು ಹೆರಿಗೆ ಸಂದರ್ಭದಲ್ಲಿ ರಕ್ತ ಹೀನತೆಯಿಂದ ಸಂಭವಿಸಬಹುದಾದ ಮರಣವನ್ನು ತಪ್ಪಿಸಲು ಸಹಕಾರಿಯಾಗಲಿದೆ ಎಂದರು.
ಹೆರಿಗೆ ಸಂದರ್ಭದಲ್ಲಿ ತಾಯಿ-ಮಗುವಿನ ಸಾವು ಸಂಭವಿಸದಂತೆ ತಡೆಯಲು ವೈದ್ಯರು ನಿಗಾವಹಿಸಿ ಚಿಕಿತ್ಸೆ ನೀಡಲು ಸೂಚಿಸಿದರು. ಮಕ್ಕಳ ಮರಣ ಆತಂಕದ ಸಂಗತಿ ತಾಯಂದಿರಿಗೆ ವೈಯಕ್ತಿಕ ಸ್ವಚ್ಚತೆ, ಹಾಲುಣಿಸುವುದು, ಮಗುವಿನ ಹಾರೈಕೆ ಕುರಿತು ಆರೋಗ್ಯ ಸಹಾಯಕಿಯರು ಅರಿವು ಮೂಡಿಸುವಂತೆ ತಿಳಿಸಿದರು.
ಹಾಸನ ವೈದ್ಯಕೀಯ ಕಾಲೇಜಿನ ನಿರ್ದೇಶಕರಾದ ಡಾ.ರವಿಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೆಂಕಟೇಶ್, ಆರ್.ಸಿ.ಹೆಚ್ ಅಧಿಕಾರಿ ಡಾ.ಜನಾರ್ಧನ್ ವಿವಿಧ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು ತಾಲ್ಲೂಕು ಆರೋಗ್ಯ ಅಧಿಕಾರಿಗಳು ಹಾಗೂ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.







