ಪಕ್ಷದ ಸಚೇತಕಾಜ್ಞೆ ಉಲ್ಲಂಘನೆಗಾಗಿ 8 ಕಾಂಗ್ರೆಸ್ ಶಾಸಕರ ಉಚ್ಚಾಟನೆ
ಗುಜರಾತ್ ರಾಜ್ಯಸಭಾ ಚುನಾವಣೆ

ಅಹ್ಮದಾಬಾದ್,ಆ.9: ಗುಜರಾತ್‌ನಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಪಕ್ಷದ ಸಚೇತಕಾಜ್ಞೆಯನ್ನು ಉಲ್ಲಂಘಿಸಿದ್ದಕ್ಕಾಗಿ ತನ್ನ ಎಂಟು ಶಾಸಕರನ್ನು ಕಾಂಗ್ರೆಸ್ ಬುಧವಾರ ಉಚ್ಚಾಟನೆಗೊಳಿಸಿದೆ. ಮುಂಬರುವ ದಿನಗಳಲ್ಲಿ ಇನ್ನೂ ಆರು ಶಾಸಕರನ್ನು ಅದು ಉಚ್ಚಾಟಿಸಲಿದೆ ಎಂದು ಗುಜರಾತ್ ಕಾಂಗ್ರೆಸ್ ಉಸ್ತುವಾರಿ ಅಶೋಕ ಗೆಹ್ಲೋಟ್ ಅವರು ಇಲ್ಲಿ ತಿಳಿಸಿದರು.
ಬುಧವಾರ ಪಕ್ಷದಿಂದ ಉಚ್ಚಾಟಿತ ಎಲ್ಲ ಎಂಟೂ ಶಾಸಕರು ರಾಜ್ಯಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್‌ನ್ನು ತೊರೆದಿದ್ದ ಹಿರಿಯ ನಾಯಕ ಶಂಕರಸಿಂಹ್ ವೇಲಾ ಅವರ ನಿಕಟವರ್ತಿಗಳಾಗಿದ್ದಾರೆ.
ಮಂಗಳವಾರ ನಡೆದಿದ್ದ ಮತದಾನದ ವೇಳೆ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಇಬ್ಬರು ಶಾಸಕರ ಮತಗಳನ್ನು ಚುನಾವಣಾ ಆಯೋಗವು ರದ್ದುಗೊಳಿಸಿದ ಬಳಿಕ ಮತ ಎಣಿಕೆ ನಡೆದು, ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ ಪಟೇಲ್ ಅವರು ವಿಜಯ ಸಾಧಿಸಿದ್ದರು. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಕೇಂದ್ರ ಸಚಿವೆ ಸ್ಮತಿ ಇರಾನಿ ಅವರು ಗುಜರಾತ್‌ನಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಇತರ ಇಬ್ಬರು ಅಭ್ಯರ್ಥಿ ಗಳಾಗಿದ್ದಾರೆ. ಮೂರು ಸ್ಥಾನಗಳಿಗಾಗಿ ಇತ್ತೀಚಿಗಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದ ಬಲವಂತಸಿಂಹ್ ರಾಜಪೂತ್ ಸೇರಿದಂತೆ ನಾಲ್ವರು ಅಭ್ಯರ್ಥಿಗಳು ಕಣದಲ್ಲಿದ್ದರು.







