ವಿದ್ಯುತ್ ಆಘಾತಕ್ಕೊಳಗಾಗಿ ರಾಷ್ಟ್ರಮಟ್ಟದ ಕುಸ್ತಿಪಟು ಮೃತ್ಯು

ಹೊಸದಿಲ್ಲಿ, ಆ.9: ವಿದ್ಯುತ್ ಆಘಾತಕ್ಕೊಳಗಾಗಿ ರಾಷ್ಟ್ರಮಟ್ಟದ ಕುಸ್ತಿಪಟು ವಿಶಾಲ್ ಕುಮಾರ್ ವರ್ಮಾ ಮೃತಪಟ್ಟಿರುವ ಘಟನೆ ನಡೆದಿದೆ. ಝಾರ್ಖಂಡ್ ರಾಜ್ಯ ಕುಸ್ತಿ ಅಸೋಸಿಯೇಶನ್ ಕಚೇರಿಯಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ.
ಮಧ್ಯಾಹ್ನ 2 ಗಂಟೆಯ ಸುಮಾರಿಗೆ ರಾಜ್ಯ ಕುಸ್ತಿ ಅಸೋಸಿಯೇಶನ್ ಕಚೇರಿಗೆ ವಿಶಾಲ್ ಕುಮಾರ್ ಭೇಟಿ ನೀಡಿದ್ದರು. ಈ ಸಂದರ್ಭ ಅವರು ವಾಶ್ ರೂಂಗೆ ತೆರಳಿದ್ದರು. ಅಲ್ಲಿ ನೇತಾಡುತ್ತಿದ್ದ ವಿದ್ಯುತ್ ತಂತಿಯೊಂದು ವಾಶ್ ರೂಂ ನೆಲದಲ್ಲಿದ್ದ ನೀರಿಗೆ ತಾಗಿದ್ದು, ವಿದ್ಯುತ್ ಆಘಾತದಿಂದ ವಿಶಾಲ್ ಕುಮಾರ್ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಕೂಡಲೇ ಅವರನ್ನು ರಾಂಚಿ ಸರ್ದಾರ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಅವರು ಮೃತಪಟ್ಟರು. ವರ್ಮಾ ಕುಟುಂಬಕ್ಕೆ ರಾಜ್ಯ ಕುಸ್ತಿ ಅಸೋಸಿಯೇಶನ್ 1 ಲಕ್ಷ ರೂ. ಪರಿಹಾರ ಘೋಷಿಸಿದೆ.
“ವಿದ್ಯುತ್ ಆಘಾತದಿಂದ ಅವರು ಮೃತಪಟ್ಟಿರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. ಸರಿಯಾಗಿ ವಯರಿಂಗ್ ನಡೆಸದೆ ಇರುವುದೇ ಅವಘಡಕ್ಕೆ ಕಾರಣ ಎಂದು” ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.





