ಜನಪರ ಯುವಜನರ ಆಯ್ಕೆಗೆ ದೇವನೂರ ಮಹಾದೇವ ಸಲಹೆ
ಪರ್ಯಾಯ ನಿರ್ಮಾಣ ದಿನ ಕಾರ್ಯಕ್ರಮ

ಮದ್ದೂರು, ಆ.9: ಕೆಟ್ಟಿರುವ ಕ್ಷೇತ್ರಕ್ಕೆ ನಾವುಗಳು ಗಮನ ಕೊಡದೆ ಹೋದರೆ ಅವುಗಳು ನಮ್ಮನ್ನು ತಿಂದು ಹಾಕುತ್ತವೆ. ರಾಜಕೀಯ ಕೆಟ್ಟಿದೆ ಎಂದು ಕೈಕಟ್ಟಿ ಕುಳಿತರೆ ಅದಕ್ಕೆ ನಾವು ಭಾರೀ ಬೆಲೆ ತೆತ್ತಬೇಕಾಗುತ್ತದೆ ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ ಎಚ್ಚರಿಕೆ ನೀಡಿದ್ದಾರೆ.
ಕ್ವಿಟ್ ಇಂಡಿಯಾ-75 ಹಿನ್ನೆಲೆಯಲ್ಲಿ ಜನಾಂದೋಲನಗಳ ಮಹಾಮೈತ್ರಿ ವತಿಯಿಂದ ಪರ್ಯಾಯ ನಿರ್ಮಾಣದ ಆರಂಭದ ದಿನವಾಗಿ ಬುಧವಾರ ಶಿವಪುರ ಧ್ವಜ ಸತ್ಯಾಗ್ರಹ ಸೌಧದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೆಟ್ಟಿರುವ ರಾಜಕೀಯ ಕ್ಷೇತ್ರವನ್ನು ಸರಿಪಡಿಸಬೇಕಾದರೆ ಪುಂಡಾಡಿಕೆ ಮಾಡುವವರನ್ನು ಬದಿಗಿರಿಸಿ ಜನಪರ ಕಾಳಜಿ ಇರುವ ಯುವಜನರನ್ನು ಸ್ಥಳೀಯ ಚುನಾವಣೆಯಿಂದ ಆಯ್ಕೆ ಮಾಡಬೇಕು ಎಂದು ಅವರು ಸಲಹೆ ಮಾಡಿದರು.
ಯುವ ಜನರು ಕಾಳಜಿವಹಿಸಿದರೆ, ಉತ್ತಮ ರಾಜಕೀಯ ವ್ಯವಸ್ಥೆ ತರುವುದು ಕಷ್ಟವಾಗುವುದಿಲ್ಲ. ಪ್ರತಿ ಹಳ್ಳಿಯಲ್ಲೂ ಹತ್ತು ಯುವಕರ ಗುಂಪು ಉತ್ತಮವಾಗಿ ಕೆಲಸ ಮಾಡಿದರೆ, ರಾಜಕೀಯದಲ್ಲಿ ಬದಲಾವಣೆ ತರಬಹುದು ಎಂದು ಅವರು ಅಭಿಪ್ರಾಯಪಟ್ಟರು. ಬ್ರಿಟೀಷರೇ ಭಾರತವನ್ನು ಬಿಟ್ಟು ತೊಲಗಿಯೆಂದು 75 ವರ್ಷಗಳ ಹಿಂದೆ ಕ್ವಿಟ್ ಇಂಡಿಯ ಚಳಿವಳಿ ನಡೆಯಿತು. ಇಂದು ಕೆಟ್ಟ ರಾಜಕಾರಣ, ಜಾತಿ, ದ್ವೇಷ ತೊಲಗಬೇಕೆಂದು ಚಳವಳಿ ಮಾಡಬೇಕಾಗಿದೆ ಎಂದು ಅವರು ವಿಷಾದಿಸಿದರು.
ಜನಸಂಗ್ರಾಮ ಪರಿಷತ್ ಗೌರವಾಧ್ಯಕ್ಷ ಎಸ್.ಆರ್.ಹಿರೇಮಠ ಮಾತನಾಡಿ, ಭ್ರಷ್ಟಾಚಾರ, ಭ್ರಷ್ಟ ರಾಜಕಾರಣ, ಇತರ ಜ್ವಲಂತ ಸಮಸ್ಯೆಗಳ ವಿರುದ್ಧ ಯುವಜನರು ದನಿ ಎತ್ತಿದರೆ ಮಾತ್ರ ದೇಶ ಉದ್ದಾರವಾಗುತ್ತದೆ ಎಂದರು. ರಾಜಕೀಯ ಲಾಭಕ್ಕಾಗಿ ಜನರಲ್ಲಿ ಜಾತಿಯ ವಿಷಬೀಜ ಬಿತ್ತಲಾಗುತ್ತಿದೆ. ಜ್ವಲಂತ ಸಮಸ್ಯೆಗಳು ಜನರನ್ನು ಕಿತ್ತು ತಿನ್ನುತ್ತಿವೆ. ಇಂತಹ ಸಮಸ್ಯೆಗಳ ವಿರುದ್ಧ ಯುವಜನರು ಹೋರಾಡಬೇಕು ಎಂದು ಅವರು ಕರೆ ನೀಡಿದರು.ಕೇಂದ್ರ ಮತ್ತು ರಾಜ್ಯ ಸರಕಾರಗಳು ಬಡವರು, ಜನಸಾಮಾನ್ಯರ ವಿರೋಧಿ ನೀತಿ ಅನುಸರಿಸುತ್ತಾ, ಶ್ರೀಮಂತರ ಮತ್ತು ಬಂಡವಾಳಶಾಹಿಗಳ ಪರ ನೀತಿಗಳನ್ನು ಜಾರಿಗೊಳಿಸುತ್ತಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಎಐಡಿವೈಓ ರಾಜ್ಯಾಧ್ಯಕ್ಷೆ ಉಮಾದೇವಿ, ರೈತಸಂಘ ರಾಜ್ಯ ಉಪಾಧ್ಯಕ್ಷ ಕೋಣಸಾಲೆ ನರಸರಾಜು, ಪ್ರ.ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ಕರ್ನಾಟಕ ಜನಶಕ್ತಿಯ ಡಾ.ವಾಸು, ಲಂಚಮುಕ್ತ ಕರ್ನಾಟಕ ವೇದಿಕೆಯ ಮುಖ್ಯಸ್ಥ ರವಿಕೃಷ್ಣಾ ರೆಡ್ಡಿ, ರೈತ ಸಂಘದ ಮುಖಂಡರಾದ ಯಧುಶೈಲ ಸಂಪತ್, ಮದ್ಯಪಾನ ನಿರ್ಮೂಲನ ವೇದಿಕೆಯ ನಿಂಗೇಗೌಡ, ರೈತ ಹೋರಾಟಗಾರ ನ.ಲಿ.ಕೃಷ್ಣ, ಶ್ರೀಧರ್, ರೇವಣ್ಣ, ಪೂರ್ಣಿಮ, ವಿಜಯಾ, ದಯಾನಂದ್, ಹುರುಗಲವಾಡಿ ರಾಮಯ್ಯ, ಪ್ರಗತಿಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಪಟ್ಟಣದ ಮಳವಳ್ಳಿ ರಸ್ತೆಯ ಪಕ್ಕದಲ್ಲಿರುವ ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಪ್ರತಿಮೆ ಆವರಣದಿಂದ ಬೆಂಗಳೂರು ಮೈಸೂರು ಹೆದ್ದಾರಿ ಮೂಲಕ ಶಿವಪುರ ಧ್ವಜ ಸತ್ಯಾಗ್ರಹದವರೆಗೆ ಬೃಹತ್ ಮೆರವಣಿಗೆ ನಡೆಯಿತು.







