ಎಲ್ಲಾ ಬ್ಯಾಂಕುಗಳು ಕನ್ನಡದಲ್ಲೇ ವ್ಯವಹರಿಸಬೇಕು: ಪ್ರೊ.ಸಿದ್ದರಾಮಯ್ಯ ತಾಕೀತು

ಬೆಂಗಳೂರು, ಆ. 9: ಕರ್ನಾಟಕದಲ್ಲಿನ ಎಲ್ಲ ರಾಷ್ಟ್ರೀಕೃತ, ಖಾಸಗಿ ಹಾಗೂ ಸ್ಥಳೀಯ ಬ್ಯಾಂಕುಗಳಲ್ಲಿ ದೈನಂದಿನ ವ್ಯವಹಾರ ಕಡ್ಡಾಯವಾಗಿ ಕನ್ನಡ ಭಾಷೆಯಲ್ಲೆ ನಡೆಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಕನ್ನಡ ಭಾಷೆ ಬಳಕೆ ಸಂಬಂಧ ಆರ್‌ಬಿಐ ಮಾರ್ಗಸೂಚಿ ಹೊರಡಿಸಿದ್ದು, ಕನ್ನಡ ಅನುಷ್ಠಾನದಲ್ಲಿ ವಿಮುಖ ನೀತಿ ಅನುಸರಿಸುವುದನ್ನು ಸರಕಾರ ಸಹಿಸುವುದಿಲ್ಲ ಎಂದು ಸಿಎಂ ಎಚ್ಚರಿಸಿದ್ದಾರೆ. ಸ್ಥಳೀಯ ಭಾಷೆಗೆ ಗೌರವ ನೀಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಾಮಾಜಿಕ ಸಂಘರ್ಷ ಉಂಟಾಗುವ ಸಾಧ್ಯತೆಗಳಿವೆ ಎಂದು ಅವರು ಹೇಳಿದ್ದಾರೆ.
ಹಿಂದಿ ಭಾಷೆ ಅನುಷ್ಠಾನಕ್ಕೆ ಹಿಂದಿ ಘಟಕ ತೆರೆದಂತೆ ಕನ್ನಡ ಭಾಷೆ ಅನುಷ್ಠಾನಕ್ಕೆ ಎಲ್ಲ ಬ್ಯಾಂಕಿನ ಎಲ್ಲ ಶಾಖೆಗಳಲ್ಲಿ ಕನ್ನಡ ಘಟಕವನ್ನು ಕಡ್ಡಾಯವಾಗಿ ತೆರೆಯಬೇಕು. ಬ್ಯಾಂಕಿನ ನೇಮಕಾತಿಯಲ್ಲಿ ಡಾ.ಮಹಿಷಿ ವರದಿ ಅನ್ವಯ ‘ಸಿ’ ಮತ್ತು ‘ಡಿ’ ವರ್ಗದ ಹುದ್ದೆಗಳನ್ನು ಸಂಪೂರ್ಣವಾಗಿ ಸ್ಥಳೀಯರಿಗೆ ನೀಡಬೇಕೆಂದು ತಾಕೀತು ಮಾಡಿದ್ದಾರೆ.
ಬ್ಯಾಂಕು ನೀಡುವ ಜಾಹೀರಾತು ಹಾಗೂ ಹೊರ ತರುವ ವಾರ್ಷಿಕ ವರದಿಗಳು ತ್ರಿಭಾಷಾ ಸೂತ್ರದನ್ವಯ ಕನ್ನಡ ಭಾಷೆಯನ್ನು ಪ್ರಧಾನವಾಗಿಸಿಕೊಂಡು ಮುದ್ರಿಸಿ ಸಾರ್ವಜನಿಕರಿಗೆ ವಿತರಿಸುವುದು, ಅಲ್ಲದೆ, ಬ್ಯಾಂಕಿನ ಗ್ರಾಹಕರು ಸ್ಪಂದನಾಶೀಲವಾಗಿ ಕೆಲಸ ಮಾಡಬೇಕು ಎಂದು ಅವರು ನಿರ್ದೇಶಿಸಿದ್ದಾರೆ.







