ಚೀನಾ ಜೊತೆಗಿನ ದ್ವಿಪಕ್ಷೀಯ ವ್ಯವಹಾರ ಸ್ಥಗಿತಗೊಳಿಸಲು ಸರಕಾರಕ್ಕೆ ಆರೆಸ್ಸೆಸ್ ಹೇಳಲಿ: ಉವೈಸಿ ಸವಾಲು

ಹೈದರಾಬಾದ್, ಆ.9: ಭಾರತೀಯರು ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂಬ ಆರೆಸ್ಸೆಸ್ ಮುಖಂಡ ಇಂದ್ರೇಶ್ ಕುಮಾರ್ ಅವರ ಹೇಳಿಕೆಯನ್ನು ‘ಕುಟಿಲ ಹೇಳಿಕೆ’ ಎಂದು ಟೀಕಿಸಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಉವೈಸಿ, ಧೈರ್ಯವಿದ್ದರೆ ಚೀನಾದ ಜೊತೆಗಿನ ದ್ವಿಪಕ್ಷೀಯ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸುವಂತೆ ಪ್ರಧಾನಿ ಮೋದಿಗೆ ಸಲಹೆ ನೀಡುವಂತೆ ಆರೆಸ್ಸೆಸ್‌ಗೆ ಸವಾಲು ಹಾಕಿದ್ದಾರೆ.
ಭಾರತೀಯರು ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಿ ‘ಸ್ವದೇಶಿ’ ಉತ್ಪನ್ನಗಳಿಗೆ ಆದ್ಯತೆ ನೀಡಬೇಕೆಂದು ಇಂದ್ರೇಶ್ ಕುಮಾರ್ ಇತ್ತೀಚೆಗೆ ಹೇಳಿಕೆ ನೀಡಿದ್ದರು.
ಇದು ಆರೆಸ್ಸೆಸ್‌ನ ಕುಟಿಲತೆಗೆ ನಿದರ್ಶನವಾಗಿದೆ. ಮೋದಿ ಕೂಡಾ ಓರ್ವ ಸ್ವಯಂಸೇವಕ. ತನ್ನ ಮಾತುಗಳಲ್ಲಿ ಕುಮಾರ್‌ಗೆ ನಿಜವಾಗಿಯೂ ನಂಬಿಕೆಯಿದ್ದರೆ ಮೋದಿ ಬಳಿ ಹೋಗಿ ಈ ಮಾತನ್ನು ಹೇಳಲಿ. ತಕ್ಷಣದಿಂದಲೇ ಚೀನಾ ಜೊತೆಗಿನ ದ್ವಿಪಕ್ಷೀಯ ವ್ಯವಹಾರ ಅಂತ್ಯಗೊಳಿಸುವಂತೆ ಸರಕಾರಕ್ಕೆ ಆರೆಸ್ಸೆಸ್ ತಿಳಿಸಲಿ ಎಂದು ಸುದ್ದಿಗಾರರ ಜೊತೆ ಮಾತನಾಡಿದ ಉವೈಸಿ ಹೇಳಿದರು.
ಅಲ್ಲದೆ ಐಪಿಎಲ್ ಅಥವಾ ಬಿಸಿಸಿಐ ನಡೆಸುವ ಯಾವುದೇ ಕ್ರಿಕೆಟ್ ಟೂರ್ನಿಗೆ ಚೀನಾದ ಸಂಸ್ಥೆಗಳು ಪ್ರಾಯೋಜಕತ್ವ ವಹಿಸಬಾರದೆಂದೂ ಸರಕಾರಕ್ಕೆ ಸಂಘಪರಿವಾರ ಹೇಳಲಿ ಎಂದ ಅವರು, ಐಫೋನ್‌ನಂತಹ ಹಲವು ವಸ್ತುಗಳು ಚೀನಾದಲ್ಲಿ ಉತ್ಪಾದನೆಯಾಗಿ ಭಾರತದಲ್ಲಿ ಮಾರಾಟವಾಗುತ್ತಿವೆ. ಅದನ್ನು ತಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು. ನೈಜ ಸಮಸ್ಯೆಯಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಇಂತಹ ಹೇಳಿಕೆಯನ್ನು ಆರೆಸ್ಸೆಸ್ ಮುಖಂಡರು ನೀಡುತ್ತಿದ್ದಾರೆ ಎಂದವರು ಟೀಕಿಸಿದರು.
ಸಿಕ್ಕಿಂ ಗಡಿಭಾಗದ ಡೋಕ ಲಾ ದಲ್ಲಿ ತನ್ನ ಸೈನಿಕರ ಸಂಖ್ಯೆಯನ್ನು ಕಡಿಮೆಗೊಳಿಸಿರುವುದಾಗಿ ಚೀನಾ ಹೇಳಿದೆ. ಈ ಕುರಿತು ಸರಕಾರದ ನಿಲುವೇನು? ಸರಕಾರ ಈ ಕುರಿತು ಯಾಕೆ ಮೌನವಾಗಿದೆ ಎಂದವರು ಪ್ರಶ್ನಿಸಿದರು.







