ಬಿಸಿ ನೀರು ಬಿದ್ದು ಗಾಯಗೊಂಡಿದ್ದ ಮಗು ಮೃತ್ಯು
ಮಂಗಳೂರು, ಆ. 9: ಬಜ್ಪೆ ಪಡುಪೆರಾರದಲ್ಲಿ ಜು.28 ರಂದು ಬಿಸಿ ನೀರು ಬಿದ್ದು ಗಾಯಗೊಂಡಿದ್ದ ಒಂದೂವರೆ ವರ್ಷದ ಮಗು ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದೆ.
ಮೃತಪಟ್ಟಿರುವ ಮಗುವನ್ನು ರಿಯಾಝ್ ಹಾಗೂ ಸುಮಯ್ಯಿ ದಂಪತಿಯ ಪುತ್ರಿ ರಿದಾ ಎಂದು ಗುರುತಿಸಲಾಗಿದೆ.
ಮಗುವಿಗೆ ಸ್ನಾನ ಮಾಡಿಸಲೆಂದು ನೀರು ಬಿಸಿ ಮಾಡಿ ಸ್ನಾನಕ್ಕೆ ಸಿದ್ಧತೆ ನಡೆಸುತ್ತಿದ್ದಾಗ ಮಗು ನೀರನ್ನು ಮೈಮೇಲೆ ಸುರಿಸಿಕೊಂಡಿತ್ತು. ಶೇ. 70ರಷ್ಟು ಸುಟ್ಟ ಗಾಯಗಳಿಗೊಳಗಾದ ಮಗುವನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲವು ದಿನಗಳ ಕಾಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗುವನ್ನು ಅನಂತರ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಮಗುವಿನ ತಂದೆ ರಿಯಾಝ್ ವಿದೇಶದಲ್ಲಿದ್ದು, ಇನ್ನಷ್ಟೇ ಆಗಮಿಸಬೇಕಾಗಿದೆ. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





