ಕುಂದಾಪುರ ಪುರಸಭೆ; ಅತಿಕ್ರಮಣ ತೆರವಿಗೆ ಸೂಚನೆ
ಉಡುಪಿ, ಆ.9: ಕುಂದಾಪುರ ಪುರಸಭಾ ವ್ಯಾಪ್ತಿಯ ಮುಖ್ಯ ರಸ್ತೆಗಳಲ್ಲಿ ಸರಕಾರಿ ರಸ್ತೆ ಸ್ಥಳಗಳನ್ನು ಹಾಗೂ ಪಾದಾಚಾರಿ ಮಾರ್ಗಗಳನ್ನು ಅತಿಕ್ರಮಣ ಮಾಡಿಕೊಂಡು ಶಾಶ್ವತ ಕಟ್ಟಡ, ತಾತ್ಕಾಲಿಕ ಕಟ್ಟಡ, ಪೆಟ್ಟಿ ಅಂಗಡಿ ಹಾಗೂ ತಳ್ಳು ಗಾಡಿಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವವರು ಕೂಡಲೇ ಅವುಗಳನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಇಂಥ ಅತಿಕ್ರಮಿತ, ಅಕ್ರಮ ನಿರ್ಮಾಣದಿಂದ ಸಾರ್ವಜನಿಕರಿಗೆ ರಸ್ತೆಯಲ್ಲಿ ನಡೆದಾಡಲು ಕಷ್ಟವಾಗುತಿದ್ದು, ವಾಹನ ನಿಲುಗಡೆಗೆ ಸಮಸ್ಯೆಗಳು ಉದ್ಭವಿಸುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಪೌರಾಡಳಿತ ನಿರ್ದೇಶಕರ 2017 ಎಪ್ರಿಲ್ ತಿಂಗಳ ಸುತ್ತೋಲೆಯಂತೆ ಈ ಎಲ್ಲಾ ಅತಿಕ್ರಮಣಗಳನ್ನು ಕರ್ನಾಟಕ ಮುನ್ಸಿಪಲ್ ಅಧಿನಿಯಂದ 1964 ಕಲಂ 216/2ರಂತೆ ಕ್ರಮಕೈಗೊಂಡು ರಸ್ತೆಯ ಬದಿಯ ಎಲ್ಲಾ ಅತಿಕ್ರಮಿತ ಜಾಗಗಳನ್ನು ತೆರವುಗೊಳಿಸಲು ಜಿಲ್ಲಾಧಿಕಾರಿ ಆದೇಶ ತಿಳಿಸಿದೆ.
ಆದುದರಿಂದ ಕುಂದಾಪುರ ಪುರಸಭಾ ವ್ಯಾಪ್ತಿಯ ಸಾರ್ವಜನಿಕರು ಹಾಗೂ ರಸ್ತೆ ಬದಿಯ ಅಂಗಡಿ ಮಳಿಗೆಗಳ ಮಾಲಕರು ಏಳು ದಿನಗಳೊಳಗೆ ಸಾರ್ವಜನಿಕ ಹಾಗೂ ಸರಕಾರಿ ರಸ್ತೆ ಜಾಗಗಳನ್ನು ಅನಧಿಕೃತವಾಗಿ ಅತಿಕ್ರಮಣ ಮಾಡಿಕೊಂಡಿರುವುದನ್ನು ತೆರವುಗೊಳಿಸಲು ಆದೇಶದಲ್ಲಿ ತಿಳಿಸಲಾಗಿದೆ. ತಪ್ಪಿದಲ್ಲಿ ಯಾವುದೇ ನೋಟಿಸ್ ನೀಡದೆ ಪುರಸಭೆಯ ವತಿಯಿಂದಲೇ ತೆರವು ಗೊಳಿಸಲಾಗುವುದು ಎಂದು ಕುಂದಾಪುರ ಪುರಸಭೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





