ಫಲಿಮಾರಿನಲ್ಲಿ ಮರಳುಗಾರಿಕೆ: ಆರೋಪ

ಪಡುಬಿದ್ರೆ, ಆ. 9: ಪಲಿಮಾರು ಗುಂಡಿ ಪ್ರದೇಶದಲ್ಲಿ ಅವ್ಯಾಹತ ಮರಳುಗಾರಿಕೆಯಿಂದ ನದಿ ಕೊರೆತವಾಗುತ್ತಿದೆ ಎಂದು ಪಲಿಮಾರು ಗುಂಡಿ ಭಾಗದ ಜನ ಆರೋಪಿಸಿದ್ದಾರೆ.
ಶಾಂಭವಿ ನದಿ ಹರಿಯುತ್ತಿದ್ದು, ನದಿಯ ಒಂದು ಬದಿ ಉಡುಪಿ ಜಿಲ್ಲೆ ಹಾಗೂ ಇನ್ನೊಂದು ಬದಿ ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯನ್ನೊಂದಿದೆ. ಆದರೆ ಉಡುಪಿ ಜಿಲ್ಲೆಯಲ್ಲಿ ಮರಳುಗಾರಿಕೆಗೆ ಅವಕಾಶವಿಲ್ಲ. ದಕ್ಷಿಣಕನ್ನಡ ವ್ಯಾಪ್ತಿಯ ಬಳ್ಕುಂಜೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಈ ಮರಳುಗಾರಿಕೆ ನಡೆಯುತಿದ್ದು, ಪ್ರದೇಶದಲ್ಲಿ ಅನ್ಯ ರಾಜ್ಯದ ಕಾರ್ಮಿಕರು ದಿನಾ ಬೆಳಿಗ್ಗೆ 4 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಸುಮಾರು 15 ದೋಣಿಗಳಲ್ಲಿ ಮರಳುಗಾರಿಕೆ ಮಾಡುತ್ತಿದ್ದಾರೆ. ಅವರು ಗುಂಡಿ ಪ್ರದೇಶ ವ್ಯಾಪ್ತಿಯಲ್ಲಿ ಮರಳುಗಾರಿಕೆ ಮಾಡುತ್ತಿರುವುದರಿಂದ ನದಿಕೊರೆತ ಹಾಗೂ ನೆರೆ ಉಂಟಾಗುತ್ತಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.
ಮರಳುಗಾರಿಕೆಯಿಂದ ಪಲಿಮಾರಿನಿಂದ ದಕ್ಷಿಣ ಕನ್ನಡ ಜಿಲ್ಲೆಯ ಕರ್ನಿರೆ ಭಾಗಗಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಸೇತುವೆಯ ತಳಭಾಗದಲ್ಲಿಯೂ ಕೊರೆತ ಉಂಟಾಗಿದೆ. ಗಡಿದಾಟಿ ಮರಳುಗಾರಿಕೆ ನಡೆಸುವುದರ ಬಗ್ಗೆ ಜಿಲ್ಲಾಡಳಿತ ಹಾಗೂ ಸರಕಾರದ ಮುಖ್ಯಕಾರ್ಯದರ್ಶಿಗೂ ಪತ್ರ ಬರೆಯಲಾಗಿದೆ ಎಂದು ತಾಲೂಕು ಪಂ. ಸದಸ್ಯ ದಿನೇಶ್ ಕೋಟ್ಯಾನ್ ತಿಳಿಸಿದರು.





