ಮಮತಾ ಬ್ಯಾನರ್ಜಿಯಿಂದ ‘ಬಿಜೆಪಿ ಕ್ವಿಟ್ ಇಂಡಿಯಾ’ ಅಭಿಯಾನ

ಮೇದಿನಿಪುರ, ಆ. 9: ಕೇಂದ್ರದಲ್ಲಿರುವ ಬಿಜೆಪಿ ಸರಕಾರ ಪ್ರಜಾಪ್ರಭುತ್ವವನ್ನು ಧ್ವಂಸ ಗೊಳಿಸುತ್ತಿದೆ ಎಂದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ತೃಣಮೂಲ ಕಾಂಗ್ರೆಸ್ ಎಲ್ಲ ವಿರೋಧ ಪಕ್ಷಗಳೊಂದಿಗೆ ಕಾರ್ಯ ನಿರ್ವಹಿಸಲಿದೆ ಎಂದು ಅವರು ಹೇಳಿದರು.
2019ರಲ್ಲಿ ಬಿಜೆಪಿ ಕ್ವಿಟ್ ಇಂಡಿಯಾ ಅಭಿಯಾನ ನಡೆಯಲಿದೆ ಎಂದ ಘೋಷಣೆ ಮಾಡಿದ ಬ್ಯಾನರ್ಜಿ, ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರಕಾರ ದೇಶದಲ್ಲಿರುವ ಜನರ ಹಕ್ಕುಗಳನ್ನು ನಿರ್ನಾಮ ಮಾಡುತ್ತಿದೆ ಎಂದರು.
ವಿಭಜನೆಗೆ ಯತ್ನ
ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ದೇಶ ವಿಭಜಿಸಲು ಪ್ರಯತ್ನಿಸುತ್ತಿದೆ. ನಾವು ಇದಕ್ಕೆ ಅವಕಾಶ ನೀಡಲಾರೆವು. 2019ರಲ್ಲಿ ನಮ್ಮ ಘೋಷಣೆ ‘ಬಿಜೆಪಿ ಕ್ವಿಟ್ ಇಂಡಿಯಾ ಆಗಿರಲಿದೆ’. ನಾವು ಇತರ ರಾಜಕೀಯ ಪಕ್ಷಗಳ ಜೊತೆಗೆ ಕಾರ್ಯ ನಿರ್ವಹಿಸಲಿದ್ದೇವೆ. ಬಿಜೆಪಿ ವಿರುದ್ಧ ಸಂಘಟಿತರಾಗಿ ಹೋರಾಡಲಿದ್ದೇವೆ. ಕೋಮು ಹಾಗೂ ದ್ವೇಷ ರಾಜಕೀಯ ಕೊನೆಗಾಣಿಸಲು ನಾವು ಬಯಸುತ್ತಿದ್ದೇವೆ ಎಂದು ಅವರು ಹೇಳಿದರು.
ಕ್ವಿಟ್ ಇಂಡಿಯಾ ಚಳವಳಿಯ 75ನೇ ವರ್ಷಾಚರಣೆಯನ್ನು ದೇಶದಲ್ಲಿ ಆಚರಿಸುತ್ತಿರುವ ಸಂದರ್ಭ ಮಮತಾ ಬ್ಯಾನರ್ಜಿ ಬಿಜೆಪಿ ಕ್ವಿಟ್ ಇಂಡಿಯಾ ಅಭಿಯಾನ ಆರಂಭಿಸಿದರು.
ಪ್ರಜಾಪ್ರಭುತ್ವಕ್ಕೆ ಜಯ ಬಿಜೆಪಿ ಅಧಿಕಾರ ಕಳೆದುಕೊಳ್ಳುವ ವರೆಗೆ ನಾವು ನಮ್ಮ ಹೋರಾಟ ನಿಲ್ಲಿಸಲಾರೆವು. ಎಲ್ಲ ಅಡೆತಡೆ ದಾಟಿ ಪ್ರಜಾಪ್ರಭುತ್ವ ವಿಜಯ ಸಾಧಿಸಲಿದೆ. ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ, ಸಿಬಿಐ ಬಳಸಿ ಅವರು ನಮಗೆ ಬೆದರಿಕೆ ಒಡ್ಡಬಹುದು. ಆದರೆ, ನಾವು ಹೆದರಲಾರೆವು ಎಂದು ಅವರು ಹೇಳಿದರು. ಜಾತ್ಯಾತೀತವಾದಕ್ಕೆ ಬೆದರಿಕೆ ಇದೆ ಎಂದು ಹೇಳಿದ ಅವರು, ಸಮಾಜದ ಆದಿವಾಸಿ ಹಾಗೂ ಹಿಂದುಳಿದ ವರ್ಗದ ಕುರಿತು ಬಿಜೆಪಿ ಮೊಸಳೆ ಕಣ್ಣೀರು ಹರಿಸುತ್ತಿದೆ ಎಂದರು.







