ಗಣಿ ಅಕ್ರಮ ಪ್ರಕರಣ: ಧರಂ ಕೋರಿಕೆ ಅರ್ಜಿ ಊರ್ಜಿತಕ್ಕೆ ಸುಪ್ರೀಂ ನಕಾರ

ಹೊಸದಿಲ್ಲಿ, ಆ.10: ಗಣಿ ಅಕ್ರಮ ಪ್ರಕರಣವೊಂದರಲ್ಲಿ ರಾಜ್ಯದ ಖಜಾನೆಗೆ ನಷ್ಟವಾಗಿರುವ ಹಿನ್ನೆಲೆಯಲ್ಲಿ ತನ್ನಿಂದ 23 ಕೋಟಿ ರೂ. ವಸೂಲಿ ಮಾಡಬೇಕೆಂದು ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿ. ಧರಂ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ಊರ್ಜಿತದಲ್ಲಿಡಬೇಕೆಂದು ಕೋರಿದ್ದ ಮನವಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ.
ಅರ್ಜಿದಾರರು ಮೃತರಾಗಿದ್ದಾರೆಂದು ತಿಳಿಸಲಾಗಿದೆ. ಆದ್ದರಿಂದ ಈ ಪ್ರಕರಣ ಅಸ್ತಿತ್ವದಲ್ಲಿ ಇರುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ರಂಜನ್ ಗೊಗೋಯ್ ಮತ್ತು ನವೀನ್ ಸಿನ್ಹ ಅವರಿದ್ದ ನ್ಯಾಯಪೀಠವೊಂದು ತಿಳಿಸಿತಲ್ಲದೆ, ದಿ. ಧರಂ ಸಿಂಗ್ ಸಲ್ಲಿಸಿದ್ದ ವಿಶೇಷ ಅನುಮತಿ ಅರ್ಜಿಯನ್ನು ಸಮಾಪನಗೊಳಿಸಿತು.
ಧರಂಸಿಂಗ್ ಜುಲೈ 27ರಂದು ನಿಧನರಾಗಿದ್ದರು. 2012ರಲ್ಲಿ ನ್ಯಾಯಾಲಯ ನೀಡಿದ ಆದೇಶದಿಂದ ಅವರ ವಾರಸುದಾರರಿಗೆ ಸಮಸ್ಯೆಯಾಗಬಹುದು ಎಂದು ಅರ್ಜಿದಾರರ ಪರ ಹಿರಿಯ ವಕೀಲರಾದ ಮಹಾಲಕ್ಷ್ಮಿ ಪಾವನಿ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಈ ವಿಷಯದ ಬಗ್ಗೆ ಈ ಕ್ಷಣ ನಿರ್ಧಾರಕ್ಕೆ ಬರಲಾಗದು. ಮಧ್ಯಾಂತರ ಆದೇಶ ಕೋರಿ ಅರ್ಜಿದಾರರು ಅರ್ಜಿ ಸಲ್ಲಿಸಿರುವ ಕಾರಣ ನೀವು ಹೈಕೋರ್ಟ್‌ಗೆ ಅಪೀಲು ಹೋಗಬಹುದು. ಒಂದು ವೇಳೆ ಹೈಕೋರ್ಟ್ ಆದೇಶದಿಂದ ವಾರಸುದಾರರಿಗೆ ಸಮಸ್ಯೆಯಾದರೆ ಆಗ ನೀವು ಇಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಂದಿನ ಕಾರ್ಯದರ್ಶಿ ನೀಡಿದ್ದ ಸಲಹೆಯನ್ನು ಧರಂ ಸಿಂಗ್ ನಿರ್ಲಕ್ಷಿಸಿದ್ದರು ಎಂದು ಬೆಂಗಳೂರು ನಿವಾಸಿ ಡಿ.ನಟೇಶ್ ಎಂಬವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ(ಪಿಐಎಲ್) ಸಲ್ಲಿಸಿದ್ದರು. ಆದರೆ ಈ ಪ್ರಕರಣದಲ್ಲಿ ಸಿಂಗ್ ಆರ್ಥಿಕ ಲಾಭ ಪಡೆಯದ ಕಾರಣ ಅವರ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯವಿಲ್ಲ ಎಂದು ಅಂದಿನ ರಾಜ್ಯಪಾಲ ರಾಮೇಶ್ವರ್ ಠಾಕೂರ್ 2009ರ ಜೂನ್ 23ರಂದು ಸೂಚಿಸಿದ್ದರು.
ಆದರೆ ಲೋಕಾಯುಕ್ತರು ಗಣಿ ಹಗರಣದ ಕುರಿತು ಸಲ್ಲಿಸಿದ್ದ ಪ್ರಥಮ ವರದಿಯಲ್ಲಿ ದುರ್ನಡತೆಗಾಗಿ ಸಿಂಗ್ ಅವರನ್ನು ದೋಷಿ ಎಂದು ತಿಳಿಸಿತ್ತು. ಅಲ್ಲದೆ ಧರಂ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೆಲವು ಜಮೀನುದಾರರು ಅಕ್ರಮ ಗಣಿಗಾರಿಕೆ ನಡೆಸಿ ಐದು ತಾಲೂಕುಗಳಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಲಾಗಿದ್ದ 2.38 ಲಕ್ಷ ಟನ್‌ಗಳಷ್ಟು ಕಬ್ಬಿಣದ ಅದಿರನ್ನು ಸಾಗಣೆ ಮಾಡಲು ಅನುಮತಿ ನೀಡಿ ರಾಜ್ಯದ ಖಜಾನೆಗೆ ನಷ್ಟ ಉಂಟಾಗಲು ಕಾರಣವಾಗಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು. ಲೋಕಾಯುಕ್ತರ ಶಿಫಾರಸನ್ನು 2009ರಲ್ಲಿ ರಾಜ್ಯಪಾಲರು ತಿರಸ್ಕರಿಸಿದ್ದರು.







