ತೊಕ್ಕೊಟ್ಟು: ಎಂಐಟಿಎಸ್ ಕಾಲೇಜಿನ ಘಟಿಕೋತ್ಸವ

ಉಳ್ಳಾಲ: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ದಾರಿ ತೋರಿಸುವ ಸಂಸ್ಥೆಯ ಕಾರ್ಯವೈಖರಿ ವಿಶಿಷ್ಟವಾಗಿದ್ದು, ಈ ಮೂಲಕ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಪ್ರಯತ್ನಕ್ಕೆ ಕೈಹಾಕಿರುವ ಸಂಸ್ಥೆ ಇತರೆ ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಮಂಗಳೂರು ಸ್ಟಾರ್ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಸಲೀಂ ಮಲಾರ್ ತಿಳಿಸಿದರು.
ಅವರು ತೊಕ್ಕೊಟ್ಟು ಹಳೇಕೋಟೆಯಲ್ಲಿರುವ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಲಾಜಿಕಲ್ ಸೈನ್ಸ್ (ಎಂಐಟಿಎಸ್ ) ಇದರ ಘಟಿಕೋತ್ಸವ ಹಾಗೂ ಫ್ರೆಶರ್ಸ್ ದಿನಾಚರಣೆಯಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು.
ಪದವಿ ಪಡೆದ ವಿದ್ಯಾರ್ಥಿಗಳು ಕೆಲಸಕ್ಕೆ ಸೇರಿಕೊಂಡ ನಂತರ ಶ್ರಮ ವಹಿಸಿ ಬದ್ಧತೆಯಿಂದ ದುಡಿದಾಗ ಕಲಿತ ಕಾಲೇಜಿನ ಹೆಸರನ್ನು ಉಳಿಸುವುದರ ಜತೆಗೆ ಜೀವನದಲ್ಲಿಯೂ ಯಶಸ್ಸು ಗಳಿಸಲು ಸಾಧ್ಯ. ಶಿಸ್ತಿನಿಂದ ಕೂಡಿ ಕೆಲಸದಲ್ಲಿ ಪಾಲ್ಗೊಳ್ಳಿ ಎಂದು ಸಲಹೆ ನೀಡಿದ ಅವರು ಕಾಲೇಜು ಸಾಗುತ್ತಿರುವ ಹಾದಿಗೆ ಮುಂದೆ ವಿಟಿಯು ಮಾನ್ಯತೆಯೂ ದೊರೆಯಲಿದೆ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಳೆಕೋಟೆ ಸೈಯದ್ ಮದನಿ ಉರ್ದು ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಕೆಎಂಕೆ ಮಂಜನಾಡಿ ಮಾತನಾಡಿ ತಾಳ್ಮೆ, ಮೌನ, ಕಾಳಜಿಯಿಂದ ವರ್ತಿಸಿದ ಸಂಸ್ಥೆಯ ಅಧ್ಯಕ್ಷರ ಗುಣನಡತೆಯಿಂದ ಸಂಸ್ಥೆಯನ್ನು ದೊಡ್ಡ ಮಟ್ಟಿಗೆ ಬೆಳೆಸಲು ಸಾಧ್ಯವಾಗಿದೆ. ಕೆಲ ವಿಚಾರಗಳಲ್ಲಿ ಹಣ ಮಾತನಾಡುವುದು ಉಂಟು. ಆದರೆ ಕೊಟ್ಟ ಫೀಸಿನಲ್ಲಿ ಜೀವನವನ್ನು ತಿದ್ದುವ ಕಾಯಕ ಸಂಸ್ಥೆಯಿಂದ ಆಗಿದೆ ಎಂದರು.
ಹೊರ ಹೋಗುವ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಲಾಜಿಕಲ್ ಸೈನ್ಸ್ (ಎಂಐಟಿಎಸ್ ) ಇದರ ಪ್ರಾಂಶುಪಾಲ ಅಸ್ಖಾನ್ ಶೇಖ್ ಮಾತನಾಡಿ ಸಕಾರಾತ್ಮಕ ಗುಣಗಳನ್ನು ಬೆಳೆಸುವುದರ ಮೂಲಕ ಜೀವನದಲ್ಲಿ ಯಶಸ್ಸನ್ನು ಗಳಿಸಬಹುದು. ನಗರದಲ್ಲಿರುವ ಕೆಲ ಶಿಕ್ಷಣ ಸಂಸ್ಥೆಗಳಿಂದ ಮಕ್ಕಳನ್ನು ಪುಸ್ತಕದ ಹುಳುಗಳಾಗಿ ಪರಿವರ್ತನೆಗೊಳಿಸಲಾಗುತ್ತಿದೆ. ಆದರೆ ಎಲ್ಲಿಯೂ ಶೇ.90-95 ಪಡೆದ ವಿದ್ಯಾರ್ಥಿಗಳು ಸ್ವಂತ ಕಂಪೆನಿ ಸ್ಥಾಪಿಸಿ ಇತರರಿಗೆ ಉದ್ಯೋಗ ಕೊಟ್ಟಿದ್ದಿಲ್ಲ. ಶೇ.80 ಪಡೆಯುವ ವಿದ್ಯಾರ್ಥಿಯನ್ನು ಶೇ.90-95 ಗಳಿಸುವಂತೆ ತರಬೇತಿ ನೀಡಬಹುದು. ಆದರೆ ಸಂಪೂರ್ಣವಾಗಿ ಅನುತ್ತೀರ್ಣರಾದವರನ್ನು ಯಶಸ್ವಿಗೊಳಿಸುವ ಪ್ರಯತ್ನ ಎಲ್ಲಿಯೂ ನಡೆಯುತ್ತಿಲ್ಲ, ಅದನ್ನು ಎಂಐಟಿಎಸ್ ಮಾಡುತ್ತಿದೆ ಎಂದರು.ಈ ಸಂದರ್ಭ ಉಪಪ್ರಾಂಶುಪಾಲ ಶೇಖ್ ಅಸ್ರಾರ್ ಉಪಸ್ಥಿತರಿದ್ದರು.
ಸಲೀಂ ಕಾರ್ಯಕ್ರಮ ನಿರೂಪಿಸಿ, ಶ್ವೇತಾ ಸ್ವಾಗತಿಸಿ, ತಿರುಮಲೇಶ್ವರ ಶರ್ಮ ವಂದಿಸಿದರು.
ಸಿವಿಲ್ ವಿಭಾಗದಲ್ಲಿ ಮಹಮ್ಮದ್ ಅಫ್ತಾಬ್ ಮುಝಾಫಿರ್ ಹಾಗೂ ಮೆಕಾನಿಕಲ್ ವಿಭಾಗದಲ್ಲಿ ರಮೀರ್ ಅಹ್ಮದ್ ಉತ್ತಮ ಹೊರಹೋಗುವ ಪ್ರಶಸ್ತಿಯನ್ನು ಪಡೆದುಕೊಂಡರು.







