ಟೀಕೆಗಳಿಲ್ಲದಿದ್ದರೆ ಪ್ರಜಾಪ್ರಭುತ್ವ ನಿರಂಕುಶ ಪ್ರಭುತ್ವವಾಗಿ ಬದಲಾಗಬಹುದು:ಅನ್ಸಾರಿ

ಹೊಸದಿಲ್ಲಿ,ಆ.10: ಸರಕಾರದ ನೀತಿಗಳ ಮುಕ್ತ ಟೀಕೆಗಳಿಗೆ ಅವಕಾಶ ನೀಡದಿದ್ದರೆ ಪ್ರಜಾಪ್ರಭುತ್ವವು ನಿರಂಕುಶ ಪ್ರಭುತ್ವವಾಗಿ ಬದಲಾಗಬಹುದು ಎಂದು ರಾಜ್ಯಸಭೆಯ ಸಭಾಪತಿ ಹಾಮಿದ್ ಅನ್ಸಾರಿ ಅವರು ಹೇಳಿದರು. ಉಪರಾಷ್ಟ್ರಪತಿ ಮತ್ತು ಮೇಲ್ಮನೆಯ ಸಭಾಪತಿಯಾಗಿ ತನ್ನ ದಶಕದ ಅಧಿಕಾರಾವಧಿಯ ಅಂತಿಮ ದಿನವಾಗಿದ್ದ ಗುರುವಾರ ತನ್ನ ವಿದಾಯ ಭಾಷಣದಲ್ಲಿ ಅನ್ಸಾರಿ ಅವರು, ರಾಜ್ಯಸಭೆಯು ಭಾರತದ ವೈವಿಧ್ಯವನ್ನು ಬಿಂಬಿಸುವ ಸಂವಿಧಾನದ ಸೃಷ್ಟಿಯಾಗಿದೆ ಎಂದು ಹೇಳಿದರು.
ತನ್ನ ಭಾಷಣದಲ್ಲಿ ಮಾಜಿ ಉಪರಾಷ್ಟ್ರಪತಿ ಎಸ್.ರಾಧಾಕೃಷ್ಣನ್ ಅವರನ್ನು ಹಲವಾರು ಬಾರಿ ಉಲ್ಲೇಖಿಸಿದ ಅವರು, ಸದನದ ಸದಸ್ಯರಿಗೆ ಟೀಕಿಸುವ ಎಲ್ಲ ಹಕ್ಕುಗಳು ಇವೆಯಾದರೂ,ಈ ಹಕ್ಕುಗಳು ಸಂಸತ್ತಿನ ಕಾರ್ಯನಿರ್ವಹಣೆಗೆ ಉದ್ದೇಶಪೂರ್ವಕ ಅಡಚಣೆ ಮತ್ತು ವ್ಯತ್ಯಯವನ್ನುಂಟು ಮಾಡಬಾರದು. ಆದ್ದರಿಂದ ಎಲ್ಲ ಗುಂಪುಗಳು ತಮ್ಮ ಹಕ್ಕುಗಳ ಜೊತೆಗೆ ತಮ್ಮ ಜವಾಬ್ದಾರಿಗಳನ್ನೂ ಹೊಂದಿವೆ ಎಂದರು.
ಪ್ರಜಾಪ್ರಭುತ್ವವೊಂದು ಅದು ಅಲ್ಪಸಂಖ್ಯಾತರಿಗೆ ನೀಡುವ ರಕ್ಷಣೆಯಿಂದ ಗುರುತಿಸಲ್ಪಡುತ್ತದೆ. ಆದರೆ ಇದೇ ವೇಳೆ ಅಲ್ಪಸಂಖ್ಯಾತರೂ ತಮ್ಮ ಹೊಣೆಗಾರಿಕೆಗಳನ್ನು ಹೊಂದಿದ್ದಾರೆ ಎಂದು ಅವರು ಹೇಳಿದರು.
ಗಲಾಟೆ-ಗದ್ದಲಗಳ ನಡುವೆಯೇ ಕಾನೂನನ್ನು ಅಂಗೀಕರಿಸಬಾರದು ಎಂಬ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅನ್ಸಾರಿ, ಆತುರದಲ್ಲಿ ಕಾನೂನು ರಚನೆ ಕುರಿತು ವಿವೇಚನಾಪೂರ್ಣ ಸಂಯಮವಿರಬೇಕು ಎಂದರು.
ಚರ್ಚೆಗಳು ಕಲಾಪಗಳಿಗೆ ಅಡ್ಡಿಯನ್ನುಂಟು ಮಾಡುವುದಿಲ್ಲ, ಬದಲಿಗೆ ಅವು ವಿವೇಚನಾಪೂರ್ಣ ಕ್ರಮ ತೆಗೆದುಕೊಳ್ಳಲು ಅನಿವಾರ್ಯ ಪೂರ್ವಪೀಠಿಕೆಗಳಾಗಿವೆ ಎಂಬ ಪ್ರಜಾಪ್ರಭುತ್ವದ ಪವಿತ್ರ ಸಿದ್ಧಾಂತವನ್ನು ರಾಜ್ಯಸಭೆಯು ಎತ್ತಿ ಹಿಡಿಯುತ್ತದೆ ಎಂದು ಹೇಳಿದ ಅವರು, ಸಭಾಪತಿ ಸ್ಥಾನ ಸ್ವತಃ ಆಟವಾಡದೆ ಆಟ ಮತ್ತು ಆಟಗಾರರನ್ನು ವೀಕ್ಷಿಸುವ ಕ್ರಿಕೆಟ್ ಪಂದ್ಯದ ಅಂಪೈರ್ ಅಥವಾ ಹಾಕಿ ಪಂದ್ಯದ ರೆಫರಿಯಂತೆ. ಅದು ಕೇವಲ ನಿಯಮಗಳ ಪುಸ್ತಕದ ಮೂಲವಾಗಿದೆ ಎಂದರು.
ಸದನದ ಕಲಾಪಗಳನ್ನು ಸದಸ್ಯರು ಹೇಗೆ ನಿರ್ವಹಿಸುತ್ತಾರೆ ಎನ್ನುವುದನ್ನು ಪ್ರಜೆಗಳು ಸೂಕ್ಷ್ಮವಾಗಿ ನೋಡುತ್ತಿರುತ್ತಾರೆ, ಹೀಗಾಗಿ ಸದನದ ಧ್ಯೇಯೋದ್ದೇಶಗಳನ್ನು ಸಾಧಿಸಲು ಎಲ್ಲ ಸದಸ್ಯರು ಬಯಸುತ್ತಾರೆ ಎಂದು ತಾನು ಆಶಿಸಿದ್ದೇನೆ ಎಂದರು.
ತನ್ನ ಅಧಿಕಾರಾವಧಿಯನ್ನು ಪ್ರಸ್ತಾಪಿಸಿದ ಅವರು, ಹತ್ತು ವರ್ಷ ವ್ಯಕ್ತಿಯೋರ್ವನ ಜೀವನದಲ್ಲಿ ಸುದೀರ್ಘ ಅವಧಿಯಾಗಿದೆ ಎಂದರು. ಸದನದ ಪ್ರತಿಷ್ಠಿತ ಸದಸ್ಯರೋರ್ವರು ತನಗೆ ಸಲಹೆ ನೀಡಿದ್ದನ್ನು ಮತ್ತು ಅದರಿಂದ ತಾನು ತುಂಬ ಪ್ರಯೋಜನ ಪಡೆದು ಕೊಂಡಿದ್ದನ್ನು ಅವರು ಸ್ಮರಿಸಿಕೊಂಡರು.







