ಅಹಿಂದ ವರ್ಗಕ್ಕೆ ರಕ್ಷಣೆ ನೀಡುವಲ್ಲಿ ಮೋದಿ ವಿಫಲ: ಎನ್.ಮಹೇಶ್

ಬೆಂಗಳೂರು, ಆ.10: ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ ಸಮುದಾಯಗಳಿಗೆ ರಕ್ಷಣೆ ನೀಡುವಲ್ಲಿ ಕೇಂದ್ರದ ಮೋದಿ ಸರಕಾರ ವಿಫಲವಾಗಿದೆ ಎಂದು ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಎನ್.ಮಹೇಶ್ ಹೇಳಿದ್ದಾರೆ.
ಅಹಿಂದ ಸಮುದಾಯಗಳ ಮೇಲೆ ದೇಶದೆಲ್ಲೆಡೆ ನಡೆಯುತ್ತಿರುವ ಹಲ್ಲೆಗಳನ್ನು ಖಂಡಿಸಿ ನಗರದ ಪುರಭವನದಿಂದ ವೌರ್ಯ ವೃತ್ತದವರೆಗಿನ ಬಿಎಸ್ಪಿ ಹಮ್ಮಿಕೊಂಡಿದ್ದ ಮೆರವಣಿಗೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಸರ್ವರ ಜೊತೆಗೂಡಿ ಸರ್ವರ ಅಭಿವೃದ್ಧಿ ಎನ್ನುತ್ತಾರೆ. ಆದರೆ, ಕ್ಷುಲ್ಲಕ ವಿಚಾರಗಳಿಗೆ ದಲಿತ, ಅಲ್ಪಸಂಖ್ಯಾತರ ಮೇಲೆ ಹಲ್ಲೆಗಳು ನಡೆಯುತ್ತಿವೆ. ಆದರೆ, ಒಂದು ಬಾರಿಯೂ ಅವರು ಖಂಡಿಸಿಲ್ಲ ಎಂದು ತಿಳಿಸಿದರು.
ದೇಶದಲ್ಲಿ ಬಹುಸಂಖ್ಯೆಯಲ್ಲಿರುವ ಬಹುಜನರು ಅಧಿಕಾರ ವಂಚಿತರಾಗಿದ್ದು, ಶೇ.15ರಷ್ಟಿರುವ ಶ್ರೀಮಂತರು ಮತ್ತು ಮೇಲ್ಜಾತಿಯವರು ದೇಶವನ್ನು ಆಳುತ್ತಿದ್ದಾರೆಂದ ಅವರು, ಬಹುಜನ ಸಮಾಜ ಪಕ್ಷಕ್ಕೆ ಸಂವಿಧಾನವೇ ಪ್ರಣಾಳಿಕೆಯಾಗಿದೆ. ಅಧಿಕಾರದಲ್ಲಿರುವ ಮೇಲ್ಜಾತಿ ಶ್ರೀಮಂತರು ಸಂವಿಧಾನವನ್ನು ಸಮರ್ಪಕವಾಗಿ ಜಾರಿಗೆ ತರುತ್ತಿಲ್ಲ ಎಂದು ಮಹೇಶ್ ನುಡಿದರು.
ಕಾಂಗ್ರೆಸ್, ಬಿಜೆಪಿ ಪಕ್ಷಗಳಿಗೆ ಮತ ನೀಡುತ್ತಿರುವುದೇ ಬಹುಜನರ ದುಸ್ಥಿತಿಗೆ ಕಾರಣ ಎಂದ ಅವರು, ಹಿಂದುಳಿದ ವರ್ಗದ ಮೋದಿ ಪ್ರಧಾನಿಯಾದರೂ ಅವರು ಆರೆಸ್ಸೆಸ್, ಅಂಬಾನಿ, ಅದಾನಿಗಳ ಕೈಗೊಂಬೆಯಾಗಿದ್ದಾರೆ. ಹಾಗಾಗಿ, ದಲಿತರ ವಿವಿಧ ಬಣಗಳು ಒಲೈಕೆ ರಾಜಕಾರಣ ಬಿಟ್ಟು ಬಹುಜನರೇ ಅಧಿಕಾರಕ್ಕೆ ಬರುವಂತೆ ಜನಜಾಗೃತಿಯಲ್ಲಿ ತೊಡಗಬೇಕು ಎಂದರು.
ಮೆರವಣಿಗೆಯಲ್ಲಿ ಬಿಎಸ್ಪಿ ಮುಖಂಡರಾದ ಆರ್.ಮುನಿಯಪ್ಪ, ಎನ್.ಕಮಲನಾಭನ್, ಎಂ.ಕೆ.ಎನ್.ಕೃಷ್ಣಪ್ಪ ಸೇರಿ ಪ್ರಮುಖರು ಹಾಜರಿದ್ದರು.







