ತುಮುಲ್‌ನಿಂದ ಉಚಿತ ಹಾಸ್ಟಲ್ ಆರಂಭ

ತುಮಕೂರು.ಆ.10: ತುಮಕೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ವತಿಯಿಂದ ರಚನೆಯಾಗಿರುವ ಹಾಲು ಉತ್ಪಾದಕರ ಸಂಘದ ಸದಸ್ಯರು ಮತ್ತು ನೌಕರರ ರೈತ ಕಲ್ಯಾಣ ಟ್ರಸ್ಟ್ ವತಿಯಿಂದ ನಗರದ ಬಿ.ಹೆಚ್.ರಸ್ತೆ ಯಲ್ಲಿರುವ ಸಿದ್ದಗಂಗಾ ಬಡಾವಣೆಯಲ್ಲಿ ಉಚಿತ ಮಹಿಳಾ ಹಾಸ್ಟಲ್ ಆರಂಭಗೊಂಡಿತ್ತು.
ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷರಾದ ಕೊಂಡವಾಡಿ ಚಂದ್ರಶೇಖರ್, ಶಾಸಕರಾದ ಡಾ.ರಫೀಕ್ ಅಹಮದ್, ಹಿರೇವ್ಮಠದ ಡಾ.ಶ್ರೀಶಿವಾನಂದ ಶಿವಾಚಾರ್ಯಸ್ವಾಮೀಜಿ, ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಬಿ.ಮುನೇಗೌಡ ಅವರು ಉಚಿತ ಮಹಿಳಾ ಹಾಸ್ಟಲ್ ಆರಂಭಕ್ಕೆ ಚಾಲನೆ ನೀಡಿದರು.
ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಮಾತನಾಡಿ, ಹಾಲು ಉತ್ಪಾದಕರು ಮತ್ತು ಅವರ ಕುಟುಂಬವರ್ಗ ಹಾಗೂ ಉತ್ಪಾದಕರ ಸಂಘಗಳಲ್ಲಿ ಕೆಲಸ ಮಾಡುವ ನೌಕರರ ಕುಟುಂಬಗಳಿಗೆ ಒಕ್ಕೂಟದ ವತಿಯಿಂದ ಕೈಲಾದ ಸಹಾಯ ಮಾಡುವ ಉದ್ದೇಶದಿಂದ ಹುಟ್ಟಿಕೊಂಡ ರೈತ ಕಲ್ಯಾಣ ಟ್ರಸ್ಟ್‌ನಿಂದ ಸುಮಾರು 250 ವಿದ್ಯಾರ್ಥಿ ನಿಯರಿಗೆ ಊಟ ಮತ್ತು ವಸತಿ ಕಲ್ಪಿಸುವ ಹಾಸ್ಟಲ್‌ನ್ನು ನಗರದ ಹ್ಲದಯಭಾಗದಲ್ಲಿ ತೆರೆಯಲಾಗಿದೆ. ಇದು ಒಕ್ಕೂಟದ ಬಹುದಿನದ ಕನಸು. ಸತತ ಮೂರು ವರ್ಷಗಳ ನಿರಂತರ ಪ್ರಯತ್ನದ ಫಲವಾಗಿ ಒಕ್ಕೂಟದ ಎಲ್ಲಾ ನಿರ್ದೇಶಕರು ಮತ್ತು ಅಧಿಕಾರಿಗಳ ಸಹಕಾರದೊಂದಿಗೆ ಈ ಹಾಸ್ಟಲ್ ತೆರೆಯಲಾಗಿದೆ. ವಿದ್ಯಾರ್ಥಿನಿಲಯ ಹಾಲು ಉತ್ಪಾಧಕರ ಮಕ್ಕಳೀಗೆ ಮಾತ್ರ ತೆರೆದಿದ್ದು, ಇದರ ಸಂಪೂರ್ಣ ಲಾಭವನ್ನು ವಿದ್ಯಾರ್ಥಿನಿಯರು ಬಳಕೆ ಮಾಡಿಕೊಳ್ಳಬೇಕೆಂದರು.
ಗ್ರಾಮೀಣ ಭಾಗದಿಂದ ಉನ್ನತ ವಿದ್ಯಾಭ್ಯಾಸದಿಂದ ನಗರಕ್ಕೆ ಬರುವ ಹಾಲು ಉತ್ಪಾಧಕರ ಮಕ್ಕಳಿಗೆ ತಂಗಲು ಸರಿಯಾದ ಜಾಗವಿಲ್ಲದೆ ಎಷ್ಟೋ ಜನ ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದನ್ನು ಮನಗಂಡು ಕೆ.ಎಂ.ಎಫ್ ಬೆಂಗಳೂರು ನಗರದಲ್ಲಿ ತಲಾ ಒಂದು ಗಂಡು ಮತ್ತು ಹೆಣ್ಣು ಮಕ್ಕಳ ಹಾಸ್ಟಲ್ ನಡೆಸುತ್ತಿದೆ.ಇದೇ ಮೊದಲ ಬಾರಿಗೆ ತುಮಕೂರು ಹಾಲು ಒಕ್ಕೂಟದಿಂದ ಹೆಣ್ಣು ಮಕ್ಕಳ ಹಾಸ್ಟಲ್ ತೆರೆಯಲಾಗಿದೆ.ಇಲ್ಲಿ ವಸತಿ ಉಚಿತವಾಗಿದ್ದು, ಆರಂಭದಲ್ಲಿ ಊಟವನ್ನು ಉಚಿತವಾಗಿ ನೀಡಲಾಗುವುದು. ಮುಂದಿನ ದಿನಗಳಲ್ಲಿ ಮೆಸ್ ಬಿಲ್ಲನ್ನು ಮಕ್ಕಳು ಭರಿಸಬೇಕಾಗುತ್ತದೆ.ಹಾಲು ಉತ್ಪಾದಕರು ಮಕ್ಕಳು ಉನ್ನತ ಶಿಕ್ಷಣ ಪಡೆದು, ಸರಕಾರದ ಆಯಕಟ್ಟಿನ ಹುದ್ದೆಗಳಿಗೆ ನೇಮಕವಾಗಲಿ ಎಂಬ ಉದ್ದೇಶ ಒಕ್ಕೂಟದ್ದಾಗಿದೆ ಎಂದು ಕೊಂಡವಾಡಿ ಚಂದ್ರಶೇಖರ್ ನುಡಿದರು.
ತುಮಕೂರು ನಗರ ಶಾಸಕ ಡಾ.ರಫೀಕ್ ಅಹಮದ್ ಮಾತನಾಡಿ, ಹೆಣ್ಣು ಮಕ್ಕಳ ಹಾಸ್ಟಲ್ ತೆರೆದಿರುವುದು ನಿಜಕ್ಕೂ ಉತ್ತಮ ಕೆಲಸ. ಇದಕ್ಕಾಗಿ ನಾನು ಒಕ್ಕೂಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಅಧಿಕಾರಿ ವರ್ಗವನ್ನು ಅಭಿನಂದಿಸುತ್ತೇನೆ. ಉಳಿಯಲು ಸರಿಯಾದ ವ್ಯವಸ್ಥೆಯಿಲ್ಲದೆ ಎಷ್ಟೋ ಗ್ರಾಮೀಣ ಹೆಣ್ಣು ಮಕ್ಕಳು ಉನ್ನತ ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದರು. ಗ್ರಾಮೀಣ ಮಕ್ಕಳ ಪ್ರತಿಭೆಯನ್ನು ಹೊರತರಲು ಹಾಲು ಒಕ್ಕೂಟ ಒಳ್ಳೆಯ ಕೆಲಸ ಮಾಡಿದೆ ಎಂದು ಪ್ರಶಂಶಿಸಿದರು.







