ಕೆ.ಆರ್.ಎಸ್.ಗೆ ಹೇಮಾವತಿ ನೀರು ಹರಿಸದಂತೆ ಎಸ್.ಶಿವಣ್ಣ ಆಗ್ರಹ
ತುಮಕೂರು,ಅ.10: ಕಾವೇರಿ ಕೊಳ್ಳಕ್ಕೆ ಹರಿಸುತ್ತಿರುವ ಹೇಮಾವತಿ ನೀರನ್ನು ತತ್‌ಕ್ಷಣದಿಂದಲೇ ನಿಲ್ಲಿಸಬೇಕು ಎಂದು ಮಾಜಿ ಸಚಿವ ಎಸ್. ಶಿವಣ್ಣ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಗೊರೂರು ಜಲಾಶಯದಿಂದ ಕಾವೇರಿ ಕೊಳ್ಳಕ್ಕೆ ನೀರು ಹರಿಸುತ್ತಿರುವು ದರಿಂದ ಹೇಮಾವತಿ ನೀರು ಕೂಡ ತಮಿಳುನಾಡಿನ ಪಾಲಾಗುತ್ತದೆ. 30 ದಿನ ಕಾವೇರಿ ಕೊಳ್ಳಕ್ಕೆ ನೀರು ಹರಿಸಿದರೆ ನಮ್ಮ ಪಾಲಿನ ನೀರು ಪಡೆಯಲು ಸಾಧ್ಯವಾಗುವುದಿಲ್ಲ ಎಂಬ ಆತಂಕವನ್ನು ವ್ಯಕ್ತಪಡಿಸಿದರು.
ನಮ್ಮ ಜಿಲ್ಲೆಯಲ್ಲಿ ಕೃಷಿಗಿರಲಿ, ಕುಡಿಯುವ ನೀರಿಗೂ ತತ್ವಾರ ಉಂಟಾಗಿರುವ ಇಂದಿನ ಸಂದರ್ಭದಲ್ಲಿ ಹೇಮಾವತಿ ನೀರನ್ನು ಕಾವೇರಿ ಕೊಳ್ಳಕ್ಕೆ ಹರಿಸುವುದು ಎಷ್ಟು ಸೂಕ್ತ. ಈ ಬಗ್ಗೆ ಸರಕಾರ ಮನಗಂಡು ತಕ್ಷಣದಿಂದಲೇ ಕೆಆರ್‌ಎಸ್‌ಗೆ ಹೇಮಾವತಿ ನೀರು ಹರಿಸುವುದನ್ನು ಸ್ಥಗಿತಗೊಳಿಸಲೇಬೇಕು.
1992-93 ರಲ್ಲಿ ಸುಪ್ರೀಂ ಕೋರ್ಟ್ ತುಮಕೂರು ಜಿಲ್ಲೆಗೆ 24 ಟಿ.ಎಂ.ಸಿ. ಹೇಮಾವತಿ ನೀರನ್ನು ನಿಗದಿಪಡಿಸಿ ಆದೇಶ ಹೊರಡಿಸಿದೆ. ಹೀಗಿರುವಾಗ ನಮ್ಮ ಪಾಲಿನ ನೀರು ಕೇಳುವುದು ಜಿಲ್ಲೆಯ ನಾಗರಿಕರ ಹಕ್ಕು. ನಮ್ಮ ಹಕ್ಕಿಗೆ ಧಕ್ಕೆ ಮಾಡಬೇಡಿ. ನಿಗದಿತ ನೀರು ಹರಿಸುವುದರಿಂದ ಜನ-ಜಾನುವಾರುಗಳು, ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಬಹುದು. ಅಲ್ಲದೆ ಕೆರೆಗಳನ್ನು ತುಂಬಿಸಿದರೆ ಅಂತರ್ಜಲ ಮಟ್ಟವೂ ಹೆಚ್ಚಲಿದೆ ಎಂದರು.
ತಮಿಳುನಾಡಿಗೆ ನೀರು ಬಿಡದೆ ನಮ್ಮ ಜಿಲ್ಲೆಗೆ ಬಿಟ್ಟರೆ ಸುಮಾರು 50 ದಿನ ನೀರು ಹರಿಸಬಹುದು. ಈ ಪೈಕಿ ಸತತವಾಗಿ 20 ದಿನ ಹರಿಸಿದರೆ ಕುಡಿಯುವ ನೀರಿಗಾಗಿ ಮೀಸಲಾಗಿರುವ ಕೆರೆಗಳನ್ನು ತುಂಬಿಸಬಹುದು. ಉಳಿದಂತೆ ಕೃಷಿ ಅಚ್ಚುಕಟ್ಟು ಪ್ರದೇಶಗಳಿಗೂ ನೀರನ್ನು ಬಳಸಿಕೊಳ್ಳಬಹುದಾಗಿದೆ. ಹೇಮಾವತಿ ಜಲಾಶಯದಿಂದ ಬಲದಂಡೆಗೆ 1 ಟಿ.ಎಂ.ಸಿ., ಕಾವೇರಿ ಕೊಳ್ಳಕ್ಕೆ 3 ಟಿ.ಎಂ.ಸಿ.ಸೇರಿ ಒಟ್ಟು 4 ಟಿ.ಎಂ.ಸಿ. ನೀರು ಹೊರ ಹೋಗುತ್ತದೆ. ಇನ್ನು ಡೆಡ್ ಸ್ಟೋರೇಜ್ 5 ಟಿ.ಎಂ.ಸಿ. ನೀರು ಇರಬೇಕು. ಒಂದು ವೇಳೆ 30 ದಿನ ಕಾವೇರಿಕೊಳ್ಳಕ್ಕೂ ಹಾಗೂ ನಮ್ಮ ಜಿಲ್ಲೆಗೂ ನೀರು ಹರಿಸಿದರೆ 8 ಟಿ.ಎಂ.ಸಿ. ನೀರು ಜಲಾಶಯದಿಂದ ಖಾಲಿಯಾಗುತ್ತದೆ. ಹೀಗಾದರೆ ನಮಗೆ ನಿಗದಿಪಡಿಸಿದಷ್ಟು ನೀರು ಸಿಗುವುದಿಲ್ಲ. ಆದ್ದರಿಂದ ಕಾವೇರಿ ಕೊಳ್ಳಕ್ಕೆ ಹರಿಸುತ್ತಿರುವ ನೀರನ್ನು ತಕ್ಷಣದಿಂದಲೇ ನಿಲ್ಲಿಸಬೇಕು. ಇಲ್ಲದಿದ್ದರೆ ಜಿಲ್ಲೆಯ ಕುಣಿಗಲ್ ಮತ್ತು ಸಿರಾ ತಾಲ್ಲೂಕಿಗೂ ಹೇಮಾವತಿ ನೀರು ಹರಿಯದೆ ಜನ ಕುಡಿಯಲು ನೀರು ಸಿಗದೆ ಮತ್ತಷ್ಟು ಪರದಾಡಬೇಕಾಗದ ಪರಿಸ್ಥಿತಿ ನಿರ್ಮಾಣ ವಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಎಂ.ಬಿ.ನಂದೀಶ್, ಆರ್.ಕಾಮರಾಜು, ಸಿದ್ದರಾಮಣ್ಣ, ಕೆ.ರಾಜೀವ್, ಗೋಪಾಲಕೃಷ್ಣ, ಹರೀಶ್, ಗಣೇಶ್, ಪ್ರಸನ್ನಕುಮಾರ್, ಏಕಾಂತ್, ಪರಮೇಶ್ ಮತ್ತಿತರರು ಉಪಸ್ಥಿತರಿದ್ದರು.







