ವಿಷ್ಣು ಸ್ಮಾರಕಕ್ಕಾಗಿ ದೆಹಲಿಯಲ್ಲಿ ರಾಷ್ಟ್ರೀಯ ಉತ್ಸವ

ತುಮಕೂರು, ಆ.10: ಕನ್ನಡದ ಮೇರುನಟ ದಿ.ಡಾ.ವಿಷ್ಣುವರ್ಧನ್ ಅವರ ಬದುಕು, ಸಾಧನೆಗಳನ್ನು ರಾಷ್ಟ್ರಮಟ್ಟದಲ್ಲಿ ಚರ್ಚಿಸುವ ಸಲುವಾಗಿ ಡಾ.ವಿಷ್ಣು ಸೇನಾ ಸಮಿತಿಯಿಂದ ಆಗಸ್ಟ್ 27ರಂದು ಇಡೀ ದಿನ ನವದೆಹಲಿಯ ಕರ್ನಾಟಕ ಸಂಘದಲ್ಲಿ ಡಾ.ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ ಹಮ್ಮಿಕೊಳ್ಳುವ ಮೂಲಕ ವಿಷ್ಣುಸ್ಮಾರಕಕ್ಕಾಗಿ ಹೋರಾಟ ನಡೆಸಲಾಗುವುದು ಎಂದು ಜಿಲ್ಲಾ ಸಮಿತಿ ಗೌರವಾಧ್ಯಕ್ಷ ರಾಜಣ್ಣ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಬೆಂಗಳೂರಿನ ಅಭಿಮಾನಿ ಸ್ಟುಡಿಯೋದಲ್ಲೇ ವಿಷ್ಣುಸ್ಮಾರಕ ನಿರ್ಮಾಣ ಮಾಡಬೇಕೆಂಬುದು ಅಭಿಮಾನಿಗಳ ಒತ್ತಾಯವಾಗಿದೆ. ಕರ್ನಾಟಕ ಸರ್ಕಾರ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಯಾವುದೇ ರೀತಿ ಸ್ಪಂದಿಸಿಲ್ಲ. ಆದ್ದರಿಂದ ದೇಹಲಿಯಲ್ಲಿ ಕಾರ್ಯಕ್ರಮ ಮಾಡುವ ಮೂಲಕ ಹೋರಾಟ ನಡೆಸಿ ಕೇಂದ್ರದ ಗಮನ ಸೆಳೆಯ ಲಾಗುವುದು. ಇದಕ್ಕೆ ಕೇಂದ್ರ ಸರಕಾರ ಯಾವುದಾದರೂ ಪರ್ಯಾಯ ವ್ಯವಸ್ಥೆ ಕಲ್ಪಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಅಭಿಮಾನಿ ಸ್ಟುಡಿಯೋದಲ್ಲಿ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಜಾಗ ನೀಡಲಾಗಿದೆ. ವಿವಿ ನಿರ್ಮಾಣಕ್ಕೂ ವಿಷ್ಣು ಸ್ಮಾರಕಕ್ಕೂ ಯಾವುದೇ ರೀತಿಯ ತೊಂದರೆಯಾಗದು. ಆದುದರಿಂದ ರಾಜ್ಯ ಸರಕಾರ ಅಭಿಮಾನಿ ಸ್ಟುಡಿಯೋದಲ್ಲಿ ಜಾಗ ನೀಡಿದರೆ ವಿಷ್ಣು ಅಭಿಮಾನಿಗಳೆಲ್ಲಾ ಸೇರಿ ಸ್ಮಾರಕ ನಿರ್ಮಾಣಕ್ಕೆ ಮುಂದಾಗುವುದಾಗಿ ತಿಳಿಸಿದರು.
ಆ.27 ದೆಹಲಿಯಲ್ಲಿ ರಾಷ್ಟ್ರೀಯ ಉತ್ಸವ: ಡಾ.ವಿಷ್ಣುವರ್ಧನ್ ಪಂಚ ಭಾಷೆಗಳಲ್ಲಿ ಅಭಿನಯಿಸಿದ್ದ ಮೊಟ್ಟ ಮೊದಲ ಕನ್ನಡ ಮೇರು ನಟರಾಗಿದ್ದಾರೆ. ಇಂತಹ ಮೇರುನಟರ ಬದುಕು, ಸಾಧನೆಗಳನ್ನ ಹೊತ್ತ ರಾಷ್ಟ್ರ ಮಟ್ಟದ ಉತ್ಸವವನ್ನು ನವದೆಹಲಿಯ ಕರ್ನಾಟಕ ಭವನದಲ್ಲಿ ಆ.27ರಂದು ಇಡೀ ದಿನ ಹಮ್ಮಿಕೊಂಡಿದ್ದು, ಅಂದು ಡಾ.ವಿಷ್ಣು ಭಾವಚಿತ್ರವನ್ನು ದೆಹಲಿಯ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುವುದು. ಡಾ.ವಿಷ್ಣು ಅವರ ಮೇಣದ 6 ಅಡಿ ಎತ್ತರದ ಪ್ರತಿಮೆ ಅನಾವರಣ, ಕನ್ನಡ ಸಾಂಸ್ಕೃತಿಕ ಲೋಕಕ್ಕೆ ವಿಷ್ಣು ಅವರ ಕೊಡುಗೆಗಳು ಕುರಿತ ವಿಚಾರಗೋಷ್ಠಿ, ಭಾರತಿ ವಿಷ್ಣುವರ್ಧನ್ ಅವರಿಗೆ ಅಭಿಮಾನಿಗಳಿಂದ ಸನ್ಮಾನ, ವಿಷ್ಣು ಅವರ ಅಪರೂಪದ ಚಲನಚಿತ್ರಗಳ ಕುರಿತ ಪುಸ್ತಕ ಬಿಡುಗಡೆ, ವಿಷ್ಣು ಅವರ ಗೀತೆಗಳ ಮ್ಯೂಸಿಕಲ್ ನೈಟ್, ಚಲನಚಿತ್ರ ಪ್ರದರ್ಶನ ಮುಂತಾಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಕರ್ನಾಟಕದಿಂದ 5000ಕ್ಕೂ ಹೆಚ್ಚು ವಿಷ್ಣು ಅಭಿಮಾನಿಗಳು ದೆಹಲಿಗೆ ತೆರಳಲಿದ್ದಾರೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾಧ್ಯಕ್ಷ ಎಸ್.ರಂಗಯ್ಯ,ಪ್ರಧಾನ ಕಾರ್ಯದರ್ಶಿ ರಂಗಸ್ವಾಮಿ, ಸದಸ್ಯ ಬಿ.ಆರ್.ಪಾಂಡು, ಟಿ.ಜಿ.ಪ್ರದೀಪ್, ಟಿ.ಎಲ್.ಕುಮಾರ್, ಟಿ.ಆರ್.ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.







