ಡ್ರಾಪ್ ನೆಪದಲ್ಲಿ ಸುಲಿಗೆ ಪ್ರಕರಣ:10 ದಿನ ವಿಶೇಷ ಕಾರ್ಯಾಚರಣೆ
ಬೆಂಗಳೂರು, ಆ.10: ಡ್ರಾಪ್ ನೆಪದಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗಿ ಮಾರಕಾಸ್ತ್ರಗಳಿಂದ ಬೆದರಿಸಿ ಸುಲಿಗೆ ಮಾಡುತ್ತಿದ್ದ ಪ್ರಕರಣಗಳನ್ನು ತಡೆಗಟ್ಟಲು ಇಂದಿನಿಂದ ಹತ್ತು ದಿನ ನಗರದ ವೈಟ್‌ಫೀಲ್ಡ್ ವಿಭಾಗದಲ್ಲಿ ವಿಶೇಷ ಕಾರ್ಯಾಚರಣೆ ಆರಂಭಿಸಲಾಗಿದೆ.
ಗುರುವಾರ ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ಅವರು ತಮ್ಮ ವಿಭಾಗದ ಇನ್ಸ್‌ಪೆಕ್ಟರ್ ಹಾಗೂ ಎಸಿಪಿಗಳೊಂದಿಗೆ ಸಭೆ ನಡೆಸಿ ಮೊದಲನೆ ದಿನವಾಗಿ ರಿಂಗ್‌ರಸ್ತೆ ಮತ್ತು ಪ್ರಮುಖ ರಸ್ತೆಗಳಲ್ಲಿ ವಿಶೇಷ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಡಿಸಿಪಿ ಅಬ್ದುಲ್ ಅಹದ್ ಅವರು, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ಕ್ಯಾಬ್ ಅವಲಂಬಿಸುವವರು ವಾಹನ ಹತ್ತುವಾಗ ಮುಂಜಾಗ್ರತೆ ವಹಿಸುವುದು ಅಗತ್ಯ. ಕ್ಯಾಬ್‌ನಲ್ಲಿ ಒಳಗಡೆ ಎಷ್ಟು ಜನ ಇದ್ದಾರೆ ಎಂದು ತಿಳಿದುಕೊಳ್ಳುವಂತೆ ಸಲಹೆ ನೀಡಿದರು.
ಕ್ಯಾಬ್‌ಗಳಲ್ಲಿ ಬರುವ ಚಾಲಕರು ಡ್ರಾಪ್ ನೀಡುವ ನೆಪದಲ್ಲಿ ಸಾರ್ವಜನಿಕರನ್ನು ಕರೆದುಕೊಂಡು ಹೋಗಿ ಮಾರ್ಗಮಧ್ಯೆ ನಿಲ್ಲಿಸಿ, ಮಾರಕಾಸ್ತ್ರಗಳಿಂದ ಬೆದರಿಸಿ, ಸುಲಿಗೆ ಮಾಡಿರುವ ಆರೋಪಗಳು ಹೆಚ್ಚಾಗಿ ಕೇಳಿಬಂದಿವೆ. ಇಂತಹ ಪ್ರಕರಣಗಳನ್ನು ತಡೆಗಟ್ಟಲು ಈ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಅಬ್ದುಲ್ ಅಹದ್ ಮನವಿ ಮಾಡಿದ್ದಾರೆ.







