ನಾಳೆ ರಾಬಿತಾ ಶೈಕ್ಷಣಿಕ ಪುರಸ್ಕಾರ ಸಮಾರಂಭ

ಭಟ್ಕಳ, ಆ.10: ಅನಿವಾಸಿ ಭಾರತೀಯರ ರಾಬಿತಾ ಸೂಸೈಟಿಯ ಪ್ರತಿಷ್ಠಿತ ರಾಬಿತಾ ಶೈಕ್ಷಣಿಕ ಪುರಸ್ಕಾರ ಸಮಾರಂಭ ಶುಕ್ರವಾರ ಸಂಜೆ 4.30ಕ್ಕೆ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲಾ ಮೈದಾನದಲ್ಲಿ ಜರುಗಲಿದೆ ಎಂದು ಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಮುಹಿದ್ದಿನ್ ರುಕ್ನುದ್ದೀನ್ ತಿಳಿಸಿದರು.
ಅವರು ಗುರುವಾರ ರಾಬಿತಾ ಸಂಸ್ಥೆಯ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿ ಮಾತನಾಡುತ್ತ ಸಮಾರಂಭದ ವಿವರವನ್ನು ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಯು.ಟಿ.ಕಾದರ್, ಗೌರವ ಅತಿಥಿಯಾಗಿ ಅಲಿಘಡ ಮುಸ್ಲಿಮ್ ಯುನಿವರ್ಸಿಟಿಯ ಕಾನೂನು ವಿಭಾಗದ ಮುಖ್ಯಸ್ಥ ಹಾಗೂ ಅಖಿಲಾ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಸದಸ್ಯ ಡಾ.ಮುಹಮ್ಮದ್ ಶಕೀಲ್ ಆಹ್ಮದ್ ಸಮ್ದಾನಿ, ಭಟ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಮಾಂಕಾಳ್ ಎಸ್.ವೈದ್ಯ ಉಪಸ್ಥಿತರಿರುವರು ಎಂದು ಅವರು ತಿಳಿಸಿದರು.
2016-17ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ಪ್ರಥಮ ಸ್ಥಾನಗಳಿಸಿದ ವಿದ್ಯಾರ್ಥಿಗೆ ಈ ವರ್ಷದಿಂದ ಜಿಲ್ಲಾಮಟ್ಟದ ಪ್ರಶಸ್ತಿ ಹಾಗೂ ಪುರಸ್ಕಾರವನ್ನು ನೀಡುತ್ತಿದೆ ಎಂದ ಅವರು, ಭಟ್ಕಳ ನಗರ ವ್ಯಾಪ್ತಿಯ ಎಸ್.ಎಸ್.ಎಲ್.ಸಿ, ಪಿ.ಯು.ಸಿ. ಪದವಿ ಹಾಗೂ ಮದರಸಾ ಶಿಕ್ಷಣದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ರಾಬಿತಾ ಗೋಲ್ಡ್ ಮೆಡಲ್ ನೀಡಲಾಗುವುದು ಎಂದರು.
ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಉತ್ತೇಜಿಸಲು ಇಂತಹ ಪ್ರಶಸ್ತಿಗಳು ಪೂರಕವಾಗುತ್ತಿವೆ. 1996 ರಿಂದ ಆರಂಭಿಸಿದ ರಾಬಿತಾ ಅವಾರ್ಡ್ ಕಾರ್ಯಕ್ರಮವು ಈಗ ವಿದ್ಯಾರ್ಥಿಗಳಿಗೆ ಪ್ರತಿಷ್ಟೆಯ ವಿಷಯವಾಗಿದೆ. ರಾಬಿತಾ ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿಗಳಿಗಳನ್ನು ಸಮಾಜ ಗೌರವದಿಂದ ಕಾಣುತ್ತಿದೆ ಎಂದರು. ಪ್ರತಿ ವರ್ಷ ಶೈಕ್ಷಣಿಕವಾಗಿ ಸರ್ವಾಂಗೀಣ ಅಭಿವೃದ್ಧಿ ಸಾಧಿಸಿದ ಶಾಲೆಯನ್ನು ಗುರುತಿಸಿ ಉತ್ತಮ ಶಾಲೆ ಪುರಸ್ಕಾರವನ್ನು ನೀಡುತ್ತಿದೆ. ಇದರಿಂದಾಗಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಆರೋಗ್ಯಕರ ಸ್ಪರ್ಧೆಯುಂಟಾಗಿ ತಮ್ಮ ಸಂಸ್ಥೆಯನ್ನು ಅಭಿವೃದ್ಧಿಯಡೆಗೆ ಸಾಗಿಸುವಲ್ಲಿ ಸಹಕಾರಿಯಾಗುತ್ತದ ಎಂದ ಅವರು, ಉತ್ತಮ ಶಿಕ್ಷಕರನ್ನು ಗುರುತಿಸಿ ಅವರಲ್ಲಿರುವ ಪ್ರತಿಭೆಗಳಿಂದ ವಿದ್ಯಾರ್ಥಿ ಸಮುದಾಯಕ್ಕೆ ಹೆಚ್ಚಿನ ಪ್ರಯೋಜನವಾಗುವ ದೃಷ್ಟಿಯಿಂದ ಆರಂಭಿಸಿದ ರಾಬಿತಾ ಬೆಸ್ಟ್ ಟೀಚರ್ಸ್ ಅವಾರ್ಡ್‌ನ್ನು ಈ ಬಾರಿಯೂ ನೀಡಲಾಗುತ್ತಿದೆ. ಶಿಕ್ಷಕ ಕೇವಲ ಪುಸ್ತಕದ ಜ್ಞಾನವನ್ನು ವಿದ್ಯಾರ್ಥಿಗೆ ವರ್ಗಾಯಿಸದೆ ಅವರ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಬೇಕು. ಅಂತಹ ಶಿಕ್ಷಕರನ್ನು ಗುರುತಿಸಿ ಅವರಿಗೆ ಸಮಾಜದಲ್ಲಿ ಸ್ಥಾನಮಾನವನ್ನು ನೀಡುವುದು ಸಂಸ್ಥೇಯ ಗುರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷ ಸಾದಿಕ್ ಪಿಲ್ಲೂರು, ಕಾರ್ಯದರ್ಶಿ ಮೌಲಾನ ತನ್ವಿರ್ ಜುಷದಿ, ರಾಬಿತಾ ಸೂಸೈಟಿಯ ಸದಸ್ಯರಾದ ಮೊಹಸಿನ್ ಶಾಬಂದ್ರಿ, ಹಾಫಿಝ್ ಅಬ್ದುಲ್ ಬಾಸಿತ್ ಮುಂತಾದವರು ಉಪಸ್ಥಿತರಿದ್ದರು.







