ಹೈಕೋರ್ಟ್‌ನಿಂದ ಎಚ್‌ಡಿಕೆಗೆ ಷರತ್ತು ಬದ್ಧ ಜಾಮೀನು
ಜಂತಕಲ್ ಮೈನಿಂಗ್ ಪ್ರಕರಣ

ಬೆಂಗಳೂರು, ಆ.10: ಜಂತಕಲ್ ಮೈನಿಂಗ್ ಕಂಪೆನಿಗೆ ಗಣಿ ಪರವಾನಿಗೆ ಕೊಡಿಸಿದ ಆರೋಪದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಈ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರತ್ನಕಲಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿತು.
ಪ್ರಕರಣದ ಸಾಕ್ಷ ನಾಶ ಪಡಿಸಲು ಯತ್ನಿಸಬಾರದು. ತನಿಖೆಗೆ ಸಹಕರಿಸಬೇಕು. ಪ್ರಕರಣದಲ್ಲಿ ಅಂತಿಮ ವರದಿ ಸಲ್ಲಿಸುವವರೆಗೆ ಅಥವಾ ಆರು ತಿಂಗಳವರೆಗೆ ಇವೆರಡರಲ್ಲಿ ಯಾವುದು ಮೊದಲು ಘಟಿಸುವುದೋ ಅಲ್ಲಿಯವರೆಗೆ 15 ದಿನಗಳಿಗೊಮ್ಮೆ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು. ಒಂದು ವೇಳೆ ತನಿಖಾಧಿಕಾರಿಗಳು ಅರ್ಜಿದಾರರನ್ನು ಬಂಧನಕ್ಕೆ ಗುರಿಪಡಿಸಿದ ಪಕ್ಷದಲ್ಲಿ 5 ಲಕ್ಷ ರೂ.ವೈಯಕ್ತಿಕ ಬಾಂಡ್ ಮತ್ತು ಇಬ್ಬರ ಭದ್ರತಾ ಖಾತರಿ ಪಡೆದು ಬಿಡುಗಡೆ ಮಾಡಬೇಕು ಎಂದು ಷರತ್ತು ಬದ್ಧ ನಿರೀಕ್ಷಣಾ ಜಾಮೀನು ನೀಡಿತು.
ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಂತಕಲ್ ಕಂಪೆನಿಗೆ ಮೈನಿಂಗ್‌ಗೆ ಅವಕಾಶ ನೀಡಿದ್ದರೆಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ವಿಚಾರಣೆ ಕೈಗೆತ್ತಿಕೊಂಡಿತ್ತು. ಈ ಸಂಬಂಧ ಕುಮಾರಸ್ವಾಮಿಯವರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೆಳಹಂತದ ನ್ಯಾಯಾಲಯ ವಜಾಗೊಳಿಸಿತ್ತು. ಇದನ್ನು ಆಕ್ಷೇಪಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇವರ ಮನವಿ ಮಾನ್ಯ ಮಾಡಿರುವ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.







