ಬಿಜೆಪಿ-ಆರೆಸೆಸ್ಸ್ ನಡುವೆ ಹೊಂದಾಣಿಕೆಯಿಲ್ಲ: ಬಿ.ಆರ್.ಪಾಟೀಲ್
ಬೆಂಗಳೂರು, ಆ.10: ಆರೆಸೆಸ್ಸ್ ಹಿಂದೂ ರಾಷ್ಟ್ರದ ಪರವಾಗಿದ್ದರೆ, ಬಿಜೆಪಿಯ ಸಂವಿಧಾನದಲ್ಲಿ ಜಾತ್ಯತೀತ ರಾಷ್ಟ್ರದ ಕಲ್ಪನೆಯಿದೆ. ಇವರಿಬ್ಬರ ನಡುವೆ ಹೊಂದಾಣಿಕೆಯಿಲ್ಲ ಎಂದು ಆಳಂದ ಶಾಸಕ ಬಿ.ಆರ್.ಪಾಟೀಲ್ ಹೇಳಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದುದರಿಂದಲೆ, ಲಿಂಗಾಯತ ಸಮಾಜದ ಮುಖಂಡರು, ಚಿಂತಕರೊಂದಿಗೆ ಇಂದು ನಡೆದ ಸಭೆಯಲ್ಲಿ ಬಿಜೆಪಿಯ ಯಾವೊಬ್ಬ ನಾಯಕರು ಪಾಲ್ಗೊಂಡಿಲ್ಲ ಎಂದರು.
ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ. ವೀರಶೈವರು ಹಿಂದು ಧರ್ಮದ ಒಂದು ಭಾಗ. ಅವರು ಹಿಂದು ಧರ್ಮದ ಆಚರಣೆಗಳನ್ನೆ ಅನುಸರಿಸುತ್ತಾರೆ. ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆಯು ಹಳೆಯ ವಿಚಾರ. ಇದು ರಾಜಕಾರಣಕ್ಕಾಗಿ ಸೃಷ್ಟಿಯಾಗಿರುವ ವಿಷಯವಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಈ ವಿಚಾರದಲ್ಲಿ ಸಮುದಾಯದ ಮುಖಂಡರು ಹಾಗೂ ರಾಜಕಾರಣಿಗಳಲ್ಲಿ ಯಾವುದೆ ವ್ಯತ್ಯಾಸಗಳಿಲ್ಲ. ನಮ್ಮ ಜನ ಮುಗ್ಧರಿದ್ದಾರೆ. ಆದುದರಿಂದಲೆ, ವೀರಶೈವ ಹಾಗೂ ಲಿಂಗಾಯತ ನಡುವಿನ ವ್ಯತ್ಯಾಸ ಅವರಿಗೆ ಗೊತ್ತಾಗುತ್ತಿಲ್ಲ ಎಂದು ಬಿ.ಆರ್.ಪಾಟೀಲ್ ಹೇಳಿದರು.





