ಕಾನೂನು ಕೈಗೆತ್ತಿಕೊಳ್ಳುವವರಿಗೆ ತಕ್ಕ ಶಾಸ್ತಿ: ಡಾ.ಸಂಜೀವ ಪಾಟೀಲ್
ಉಡುಪಿ ಜಿಲ್ಲಾ ನೂತನ ಎಸ್ಪಿಯಾಗಿ ಅಧಿಕಾರ ಸ್ವೀಕಾರ

ಉಡುಪಿ, ಆ.10: ಸಮಾಜದಲ್ಲಿರುವ ಶೇ.1ರಷ್ಟು ಕೆಟ್ಟವರನ್ನು ಕಡೆಗಣಿಸಿ ಅವರ ವಿರುದ್ಧ ಧ್ವನಿ ಎತ್ತುವ ಕೆಲಸವನ್ನು ಉಳಿದ ಜನರು ಮಾಡಬೇಕು. ಕಾನೂನು ಕೈಗೆತ್ತಿಕೊಳ್ಳುವವರು ಯಾವುದೇ ಪಕ್ಷ, ಧರ್ಮ, ಜಾತಿಯವರೇ ಆಗಿರಲಿ, ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು ತಕ್ಕ ಶಾಸ್ತಿ ಮಾಡ ಲಾಗುವುದು ಎಂದು ಉಡುಪಿ ಜಿಲ್ಲಾ ನೂತನ ಪೊಲೀಸ್ ಅಧೀಕ್ಷಕ ಡಾ. ಸಂಜೀವ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ಉಡುಪಿಯ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ ಅವರಿಂದ ಅಧಿಕಾರ ಸ್ವೀಕರಿಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು.
ಶೇ.1ರಷ್ಟು ಕೆಟ್ಟವರು ಎಲ್ಲ ಸಮಾಜದಲ್ಲಿ ಇರುತ್ತಾರೆ. ಅವರಿಗಿಂತ ಉಳಿದ ಶೇ.99ರಷ್ಟಿರುವ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಜನರನ್ನು ಭೇಟಿ ಮಾಡಿ, ಆ ಮೂಲಕ ಜನಮುಖಿ ಪೊಲೀಸ್ ವ್ಯವಸ್ಥೆ ಜಾರಿಗೆ ತರಲಾಗುವುದು. ಸಾರ್ವಜನಿಕರ ಆಶೋತ್ತರಗಳಿಗೆ ಸ್ಪಂದಿಸಲು ಪ್ರಯತ್ನಿಸ ಲಾಗುವುದು ಎಂದರು.
ಮುಂದಿನ ದಿನಗಳಲ್ಲಿ ಜಿಲ್ಲೆಯ ಪ್ರತಿ ಪೊಲೀಸ್ ಠಾಣೆಗಳಿಗೆ ಮತ್ತು ಸಾಧ್ಯವಾದರೆ ಹಳ್ಳಿಗಳಿಗೆ ಭೇಟಿ ನೀಡಿ ಜನರ ನಿರೀಕ್ಷೆಯನ್ನು ತಿಳಿದುಕೊಳ್ಳಲು ಪ್ರಯತ್ನಿಸಲಾಗುವುದು. ಈಗಾಗಲೇ ಹಿಂದಿನ ಎಸ್ಪಿಗಳಾಗಿದ್ದ ಅಣ್ಣಾಮಲೈ ಹಾಗೂ ಕೆ.ಟಿ.ಬಾಲಕೃಷ್ಣ ಅವರ ಜೊತೆ ಜಿಲ್ಲೆಯ ಕುರಿತು ಮಾತನಾಡಿದ್ದೇನೆ. ಈಗಿರುವ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳುತ್ತೇನೆ. ಮುಂದೆ ಎಲ್ಲರ ಸಹಕಾರ ಪಡೆದು ಕೆಲಸ ಆರಂಭಿಸುತ್ತೇನೆ ಎಂದು ಅವರು ತಿಳಿಸಿದರು.
ಫೋನ್ ಇನ್ ಕಾರ್ಯಕ್ರಮ: ಮುಂದಿನ ವಾರದಿಂದ ಸಾರ್ವಜನಿಕರ ಜೊತೆ ಫೋನ್ ಇನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಮುಂದಿನ ಶುಕ್ರವಾರದಿಂದ ಇದಕ್ಕೆ ಚಾಲನೆ ನೀಡಲು ನಿರ್ಧರಿಸಲಾಗಿದೆ. ವಾರಕ್ಕೆ ಒಂದು ಗಂಟೆಗಳ ಕಾಲ ಈ ಕಾರ್ಯಕ್ರಮ ನಡೆಯಲಿದೆ. ನಾನು ಆ ದಿನ ಜಿಲ್ಲೆಯಲ್ಲಿ ಇಲ್ಲದಿದ್ದರೆ ಅದನ್ನು ಬೇರೆ ಹಿರಿಯ ಅಧಿಕಾರಿಗಳು ನಡೆಸಿಕೊಡಲಿದ್ದಾರೆ ಎಂದು ಎಸ್ಪಿ ಹೇಳಿದರು.
ಜಿಲ್ಲೆಯಲ್ಲಿ ನಡೆಯುತ್ತಿರುವ ಎಲ್ಲ ರೀತಿಯ ಕಾನೂನು ಬಾಹಿರ ಚಟುವಟಿಕೆ ಗಳನ್ನು ನಿಲ್ಲಿಸಲು ಇದೀಗ ನಿರ್ದೇಶನ ನೀಡಿದ್ದೇನೆ. ಯಾವುದೇ ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೆ ಸಾರ್ವಜನಿಕರು ಕೂಡಲೇ ಆಯಾ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಠಾಣೆಯ ಅಧಿಕಾರಿಗಳಲ್ಲಿ ನಂಬಿಕೆ ಇಲ್ಲದಿದ್ದರೆ ಮೇಲಾಧಿಕಾರಿಗಳಿಗೆ, ಇಲ್ಲ ನನಗೆ ನೇರವಾಗಿ ದೂರು ನೀಡಬಹು ದಾಗಿದೆ. ಅದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರಗಿಸಲಾಗುವುದು. ಜಿಲ್ಲೆಯಲ್ಲಿ ಇಂತಹ ಚಟುವಟಿಕೆಗಳಿಗೆ ಎಂದಿಗೂ ಅವಕಾಶ ನೀಡುವುದಿಲ್ಲ. ಇಂತಹ ಶಕ್ತಿ ಗಳನ್ನು ತಡೆಯದೆ ಅವರೊಂದಿಗೆ ಶಾಮೀಲಾಗುವ ಅಧಿಕಾರಿಗಳ ವಿರುದ್ಧವೂ ಸೂಕ್ತ ಕ್ರಮ ತೆಗೆದು ಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಸಾರ್ವಜನಿಕರಿಗೆ ಪೊಲೀಸ್ ಇಲಾಖೆಯ ಸ್ಪಂದನೆಯಲ್ಲಿ ಕೊರತೆ ಕಂಡು ಬಂದರೆ ಎಚ್ಚರಿಸುವ ಪ್ರಯತ್ನವನ್ನು ಮಾಧ್ಯಮದವರು ಮಾಡಬೇಕು. ಜನರಿಂದ ನಮಗೆ ತಲುಪಲು ಸಾಧ್ಯವಾಗದ ಮಾಹಿತಿಯನ್ನು ಮಾಧ್ಯಮದ ಮೂಲಕ ಪಡೆಯುವ ಬಗ್ಗೆ ನಾವು ನಿರೀಕ್ಷೆ ಮಾಡುತ್ತೇವೆ. ಕಾನೂನು ಸುವ್ಯವಸ್ಥೆ ಕಾಪಾಡು ವಲ್ಲಿ ಮಾಧ್ಯಮದರ ಸಹಕಾರ ಅತಿ ಅಗತ್ಯ ಎಂದರು.
ಸಚಿವರ ಅಭಿನಂದನೆ: ನೂತನ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ಡಾ. ಸಂಜೀವ ಪಾಟೀಲ್ ಅವರಿಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಇಂದು ಅಭಿನಂದನೆ ಸಲ್ಲಿಸಿದರು.
ತುಳು ಕಲಿಯಲು ಆದ್ಯತೆ
‘ಇನ್ನು ನನ್ನ ಪ್ರಥಮ ಆದ್ಯತೆ ತುಳು ಭಾಷೆ ಕಲಿಯುವುದು. ಮಂಗಳೂರಿನಲ್ಲಿ ಡಿಸಿಪಿ ಆಗಿದ್ದಾಗ ಸ್ವಲ್ಪ ಸ್ವಲ್ಪ ತುಳು ಕಲಿತಿದ್ದೆ. ಇಲ್ಲಿ ಪೂರ್ತಿ ಕಲಿಯಬೇಕೆಂದಿ ದ್ದೇನೆ. ಇನ್ನು ಒಂದು ತಿಂಗಳೊಳಗೆ ಕಲಿಯಲು ಪ್ರಯತ್ನ ಮಾಡುತ್ತೇನೆ. ಇದಕ್ಕೆ ಮಾಧ್ಯಮದವರ ಸಹಕಾರ ಕೂಡ ಬೇಕು ಎಂದು ಎಸ್ಪಿ ಡಾ.ಸಂಜೀವ ಪಾಟೀಲ್ ಹೇಳಿದರು.







