ಬ್ರಿಟಿಷರಿಗೆ ವಿಧೇಯರಾಗಿದ್ದವರು ಅಧಿಕಾರದಲ್ಲಿರುವುದು ದೇಶದ ಸಂವಿಧಾನಕ್ಕೆ ದೊಡ್ಡ ಅಪಾಯ: ಕೆ.ಪ್ರಕಾಶ್

ಕುಂದಾಪುರ, ಆ.10: ದೇಶ ಸ್ವಾತಂತ್ರ್ಯಗಳಿಸಲು ಹಿಂದುಗಳು ಮತ್ತು ಮುಸಲ್ಮಾನರು ಐಕ್ಯತೆಯಿಂದ ಹೋರಾಡಿದರು. ಈ ಐಕ್ಯ ಹೋರಾಟದ ಪರಂಪರೆಯ ಫಲವಾಗಿ ಭಾರತದಲ್ಲಿ ಜಾತ್ಯಾತೀತ ಸಂವಿಧಾನ ರೂಪು ಗೊಂಡಿತು. ಆದರೆ ಅಂದು ಹೋರಾಟದಲ್ಲಿ ಭಾಗವಹಿಸದೇ ಬ್ರಿಟಿಷರಿಗೆ ವಿಧೇಯರಾಗಿದ್ದವರು ಇಂದು ಅಧಿಕಾರದಲ್ಲಿರುವುದು ದೇಶದ ಸಂವಿಧಾನಕ್ಕೆ ದೊಡ್ಡ ಅಪಾಯವಾಗಿದೆ ಎಂದು ಸಿಪಿಎಂ ರಾಜ್ಯ ಮುಖಂಡ ಕೆ.ಪ್ರಕಾಶ್ ಹೇಳಿದ್ದಾರೆ.
ಸಿಪಿಐಎಂ ಪಕ್ಷದ ಆಶ್ರಯದಲ್ಲಿ ಬುಧವಾರ ಕುಂದಾಪುರ ಹೆಂಚು ಕಾರ್ಮಿಕ ಭವನದಲ್ಲಿ ನಡೆದ ಬ್ರಿಟಿಷರೆ ಭಾರತ ಬಿಟ್ಟು ತೊಲಗಿ 75ನೆ ವರ್ಷಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು. ಬ್ರಿಟಿಷರು ಜನತೆಯ ಐಕ್ಯ ಹೋರಾಟ ತಡೆಯುವ ವ್ಯರ್ಥ ಪ್ರಯತ್ನ ಮಾಡಿದ್ದರು. ಸಂಪೂರ್ಣ ಸ್ವಾತಂತ್ರ್ಯದ ಘೋಷಣೆ ಕರೆಕೊಟ್ಟ ಕಮ್ಯೂನಿಸ್ಟ್ ಪಕ್ಷವನ್ನು ಅದೇ ಬ್ರಿಟಿಷರು ನಿಷೇಧಿಸಿದರು. ಹೀಗಾಗಿ ಕಮ್ಯುನಿಷ್ಟರು ಭೂಗತರಾಗಿಯೇ ಸ್ವಾತಂತ್ರ್ಯ ಹೋರಾಟ ನಡೆಸಿದರು ಎಂದವರು ವಿವರಿಸಿದರು.
ಬ್ರಿಟೀಷರೆ ಭಾರತ ಬಿಟ್ಟು ತೊಲಗಿ ಚಳವಳಿಯ ಸಂಧರ್ಭದಲ್ಲಿ ಬಂಗಾಲ ದಲ್ಲಿ ಜನಸಂಘ ಸ್ಥಾಪಕ, ಮುಖಂಡ ಶ್ಯಾಮ್ ಪ್ರಸಾದ್ ಮುಖರ್ಜಿ ಹಿಂದೂ ಮಹಾಸಭಾದ ಭಾಗವಾಗಿ ಮುಸ್ಲಿಂ ಲೀಗ್ ಜೊತೆ ಮೈತ್ರಿ ಸರಕಾರದಲ್ಲಿ ಅರ್ಥ ಮಂತ್ರಿಯಾಗಿದ್ದರು. ಇವರು ಈ ಚಳುವಳಿಯ ಸಂದರ್ಭದಲ್ಲಿ ಬ್ರಿಟಿಷರಿಗೆ ಸಹಕರಿಸಬೇಕು ಎಂದು ಕರೆ ನೀಡಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಆರೆಸ್ಸೆಸ್‌ನ ಪಾತ್ರ ಹಲವಾರು ಸಂದರ್ಭಗಳಲ್ಲಿ ಬ್ರಿಟಿಷರಿಗೆ ವಿಧೇಯರಾಗಿರುವುದು ಸ್ಪಷ್ಟವಾಗಿ ಕಾಣಬಹುದಾಗಿದೆ ಎಂದು ಅವರು ಆರೋಪಿಸಿದರು.
ಆರೆಸ್ಸೆಸ್ ಇಂದು ವಿ.ಡಿ.ಸಾವರ್ಕರ್‌ರನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಜನರ ಮುಂದೆ ತಪ್ಪಾಗಿ ಬಿಂಬಿಸುತ್ತಿದೆ. ಆದರೆ ಅಂಡಮಾನ್ ಜೈಲಿನಲ್ಲಿ ಬ್ರಿಟಿಷರಿಗೆ ವಿಧೆೇಯನಾಗಿರುತ್ತೇನೆಂದು ಕ್ಷಮದಾನ ಪತ್ರ ಬರೆದುಕೊಟ್ಟು ಕೊನೆವರೆಗೂ ಹಾಗೆಯೆ ಬದುಕಿದವರು ಸ್ವಾತಂತ್ರ್ಯ ಹೋರಾಟಗಾರನಾಗಲು ಹೇಗೇ ಸಾಧ್ಯ? ಎಂದು ಪ್ರಶ್ನಿಸಿದ ಅವರು, ಇಂದಿಗೂ ಆ ಪತ್ರ ದೆಹಲಿ ರಾಷ್ಟ್ರೀಯ ಪತ್ರಾಗಾರದಲ್ಲಿದೆ ಎಂದರು.
ಕಮ್ಯುನಿಷ್ಟರು ಅಂಡಮಾನ್ ಜೈಲಲ್ಲಿ ಬಂಧಿಯಾಗಿ ತೀವ್ರ ಚಿತ್ರಹಿಂಸೆ ಅನುಭವಿಸಿದರೂ ಕೊನೆವರೆಗೂ ದೇಶಕ್ಕಾಗಿ ಹೋರಾಡಿದರು. ದೇಶದ ಐಕ್ಯತೆ
ಒಡೆಯುವ ಕೋಮುವಾದಿ, ಮೂಲಭೂತವಾದಿ, ಭಯೋತ್ಪಾದಕ ಶಕ್ತಿಗಳೇ ದೇಶ ಬಿಟ್ಟು ತೊಲಗಿ ಎಂದು ಸಿಪಿಎಂ ರಾಷ್ಟ್ರ ವ್ಯಾಪಿ ಕರೆ ನೀಡಿದೆ ಎಂದರು.
ಸಿಪಿಎಂ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ.ಶಂಕರ್, ಪಕ್ಷದ ಜಿಲ್ಲಾ ಕಾರ್ಯ ದರ್ಶಿ ಬಾಲಕೃಷ್ಣ ಶೆಟ್ಟಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿ.ಎನ್. ನಾಗರಾಜ್‌ರವರ ‘ತೊಲಗು ತೊಲಗಾಚೆ ಪರದೇಶಿ ಸುಲಿಗೆಗಾರ’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಸುರೇಶ್ ಕಲ್ಲಾಗರ್ ಸ್ವಾಗತಿಸಿದರು. ಎಚ್. ನರಸಿಂಹ ವಂದಿಸಿದರು.







