ನನ್ನ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಲ್ಲ: ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟನೆ

ಬೆಂಗಳೂರು, ಆ.10: ‘ಆದಾಯ ತೆರಿಗೆ(ಐಟಿ) ಅಧಿಕಾರಿಗಳು ನನ್ನ ವೈಯಕ್ತಿಕ ಮತ್ತು ನನ್ನ ಒಡೆತನದ ಯಾವುದೇ ಸಂಸ್ಥೆಗೆ ಸೇರಿದ ಬ್ಯಾಂಕು ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿಲ್ಲ’ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಗುರುವಾರ ಇಲ್ಲಿನ ಸದಾಶಿವನಗರದಲ್ಲಿನ ತನ್ನ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನನಗೆ ಸೇರಿದ ಹಲವು ಸಂಸ್ಥೆಗಳಿವೆ. ಈ ಸಂಸ್ಥೆಗಳಲ್ಲಿ ಪ್ರತಿನಿತ್ಯ ವಹಿವಾಟು ನಡೆಯುತ್ತಿದ್ದು, ಪ್ರತಿ ಸಂಸ್ಥೆಗೂ ತಮ್ಮದೆ ಆದ ಖಾತೆಗಳಿವೆ. ನನಗೆ ವೈಯಕ್ತಿಕ ಖಾತೆಗಳಿವೆ. ಐಟಿ ದಾಳಿ ನಂತರ ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂಬುದು ಸತ್ಯಕ್ಕೆ ದೂರ ಎಂದರು.
ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ನನಗೆ ಯಾವುದೇ ನೋಟಿಸ್ ನೀಡಿಲ್ಲ. ವೈಯಕ್ತಿಕವಾಗಿ ನಾನೇ ಕೆಲವು ಸ್ಪಷ್ಟನೆಗಳನ್ನು ನೀಡಬೇಕಿದೆ. ಹೀಗಾಗಿ ಶೀಘ್ರದಲ್ಲೇ ಆದಾಯ ತೆರಿಗೆ ಇಲಾಖೆ ಕಚೇರಿಗೆ ಭೇಟಿ ನೀಡಲಿದ್ದೇನೆ ಎಂದ ಅವರು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ನನಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಮಾಹಿತಿ ಬಹಿರಂಗ ಸಾಧ್ಯೆ: ತೆರಿಗೆ ವಂಚನೆ ಸಂಬಂಧ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಮನೆ, ಒಡೆತನದ ಕಚೇರಿಗಳು ಸೇರಿದಂತೆ ವಿವಿಧೆಡೆಗಳಲ್ಲಿ ಆ.2ರಂದು ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು, ದಾಖಲೆ ಪರಿಶೀಲನೆ ಕಾರ್ಯ ಕೈಗೊಂಡಿದ್ದು, ಅನಂತರ ತೆರಿಗೆ ವಂಚನೆಯ ಬಗ್ಗೆ ಮಾಹಿತಿ ಬಹಿರಂಗಪಡಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ದಾಳಿ ಸಂದರ್ಭದಲ್ಲಿ ವಶಪಡಿಸಿಕೊಂಡಿದ್ದ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿರುವ ಐಟಿ ಅಧಿಕಾರಿಗಳು, ತೆರಿಗೆ ವಂಚನೆ ಕಂಡುಬಂದರೆ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ. ಒಂದು ವೇಳೆ ಬೇನಾಮಿ ಆಸ್ತಿ, ವ್ಯವಹಾರಗಳ ಬಗ್ಗೆ ಮಾಹಿತಿ ಸಿಕ್ಕರೆ ಜಾರಿ ನಿರ್ದೇಶನಾಯಲಕ್ಕೆ(ಇಡಿ) ಪ್ರಕರಣ ವರ್ಗಾವಣೆ ಮಾಡುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.







