ಟ್ವೆಂಟಿ-20 ಕ್ರಿಕೆಟ್ ಸೃಷ್ಟಿಕರ್ತ ತಾನೆಂದ ಕ್ರಿಸ್ ಗೇಲ್

ಜಮೈಕಾ, ಆ.10: ವೆಸ್ಟ್‌ಇಂಡೀಸ್‌ನ ಸ್ಟಾರ್ ಕ್ರಿಕೆಟಿಗ ಕ್ರಿಸ್ ಗೇಲ್ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿ. ಕೈಗೆ ಮೈಕ್ ಸಿಕ್ಕರೂ ಚೆನ್ನಾಗಿ ನಟಿಸುವೆ ಎಂದು ತೋರಿಸಿಕೊಟ್ಟಿದ್ದಾರೆ.
ಇತ್ತೀಚೆಗೆ ಫೋಕ್ಸ್ ಸ್ಪೋರ್ಟ್ಸ್‌ಗೆ ನೀಡಿದ ಸಂದರ್ಶನವೊಂದರಲ್ಲಿ ತಾನೇ ಟ್ವೆಂಟಿ-20 ಕ್ರಿಕೆಟ್‌ನ ಸೃಷ್ಟಿಕರ್ತ ಎಂದು ಹೇಳಿಕೊಂಡಿದ್ದಾರೆ.
ಜಮೈಕಾ ಕ್ರಿಕೆಟಿಗ ಪವರ್‌ಹಿಟ್ಟಿಂಗ್‌ನ ಮೂಲಕ ವಿಶ್ವಖ್ಯಾತಿ ಪಡೆದಿದ್ದಾರೆ.ಹೀಗಾಗಿ ಟ್ವೆಂಟಿ-20 ಕ್ರಿಕೆಟ್‌ನ್ನು ತಾನೇ ಸೃಷ್ಟಿಸಿದ್ದೇನೆ ಎಂಬ ಅವರ ಹೇಳಿಕೆಯಲ್ಲಿ ಅಚ್ಚರಿಯಿಲ್ಲ.
ದೇಶೀಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗಳಲ್ಲಿ 298 ಪಂದ್ಯಗಳನ್ನು ಆಡಿರುವ ಗೇಲ್ 18 ಶತಕ ಹಾಗೂ 61 ಅರ್ಧಶತಕಗಳನ್ನು ಒಳಗೊಂಡ 10,000ಕ್ಕೂ ಅಧಿಕ ರನ್ ದಾಖಲಿಸಿದ್ದಾರೆ. ವೆಸ್ಟ್‌ಇಂಡೀಸ್‌ನ ಪರ 51 ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದ ಗೇಲ್ 34.93ರ ಸರಾಸರಿಯಲ್ಲಿ 1,537 ರನ್ ಗಳಿಸಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ನಿರಂತರವಾಗಿ ಆಫ್ ಸ್ಪಿನ್ ಬೌಲಿಂಗ್‌ನ ಮೂಲಕ ಗಮನ ಸೆಳೆದಿರುವ ಅವರು ವೃತ್ತಿಪರ ಲೀಗ್‌ಗಳ 125 ಇನಿಂಗ್ಸ್‌ಗಳಲ್ಲಿ 77 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
‘‘ಹೌದು, ಟ್ವೆಂಟಿ-20 ಕ್ರಿಕೆಟ್ ನನಗಾಗಿಯೇ ಸೃಷ್ಟಿಯಾಗಿದೆ. ನಿಜ ಹೇಳಬೇಕೆಂದರೆ ಟ್ವೆಂಟಿ-20 ಕ್ರಿಕೆಟ್‌ನ್ನು ಸೃಷ್ಟಿಸಿದ್ದೇ ನಾನು. ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಬದುಕು ಕಟ್ಟಿಕೊಳ್ಳಬಹುದು ಎಂದು ಜನರು ಹಾಗೂ ಆಟಗಾರರು ತಿಳಿದುಕೊಳ್ಳಲಿ. ಬ್ಯಾಟಿಂಗ್ ದೃಷ್ಟಿಕೋನದಿಂದ ಟ್ವೆಂಟಿ-20ಯಲ್ಲಿ ಸಾಧನೆ ಮಾಡಬಹುದು ಎಂದು ಆಟಗಾರರು ತಿಳಿದುಕೊಳ್ಳಬೇಕಾಗಿದೆ’’ ಎಂದು ಗೇಲ್ ಹೇಳಿದ್ದಾರೆ.
ಗೇಲ್ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಖಾಯಂ ಸದಸ್ಯರಾಗಿದ್ದರು. ಪ್ರಸ್ತುತ ಕೆರಿಬಿಯನ್ ಪ್ರೀಮಿಯರ್ ಲೀಗ್(ಸಿಪಿಎಲ್)ನಲ್ಲಿ ಆಡುತ್ತಿದ್ದಾರೆ.







