ನಾಡದೋಣಿ ಮೀನುಗಾರರಿಂದ ಮೀನುಗಾರಿಕೆ ಕಚೇರಿ ಮುತ್ತಿಗೆ
ಮೀನುಗಾರರೊಂದಿಗೆ ಪರಿಶೀಲನಾಧಿಕಾರಿ ಅಸಭ್ಯ ವರ್ತನೆಯ ಆರೋಪ

ಭಟ್ಕಳ, ಆ.10: ದೋಣಿ ಪರಿಶೀಲನೆಗೆಂದು ಭಟ್ಕಳಕ್ಕೆ ಬಂದ ಪರಿಶೀಲನಾಧಿಕಾರಿ ವೆಂಕಟ್ರಮಣ ಹೆಗಡೆ ಮೀನುಗಾರರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆಂದು ಆರೋಪಿಸಿ ನೂರಾರು ಮಂದಿ ಮೀನುಗಾರರು ಗುರುವಾರ ಸಾಗರ ರಸ್ತೆಯಲ್ಲಿರುವ ಮೀನುಗಾರಿಕಾ ಕಚೇರಿಗೆ ತೆರಳಿ ಮುತ್ತಿಗೆ ಹಾಕಿದ ಘಟನೆ ಜರಗಿದೆ.
ಕಾರವಾರದ ಮೀನುಗಾರಿಕೆಯ ಸಹಾಯಕ ಉಪನಿರ್ದೇಶಕ ವೆಂಕಟ್ರಮಣ ಹೆಗಡೆ ಬುಧವಾರ ದೋಣಿ ಪರೀಶೀಲನೆಗೆಂದು ಭಟ್ಕಳಕ್ಕೆ ಬಂದಿದ್ದರು. ಮುಂಡಳ್ಳಿ ಮತ್ತು ಬೆಳಕೆಯಲ್ಲಿ ನೀರಿಗಿಳಿದ ನಾಡದೋಣಿಗಳನ್ನಷ್ಟೆ ಪರೀಶೀಲನೆ ನಡೆಸಿದ್ದರು. ಈ ಕುರಿತು ಮೀನುಗಾರರು ಆಕ್ಷೇಪ ವ್ಯಕ್ತಪಡಿಸಿ, ದಡದಲ್ಲಿರುವ ದೋಣಿಗಳನ್ನು ಪರೀಶಿಲಿಸಿ ಎಂದು ಅಧಿಕಾರಿಯನ್ನು ಒತ್ತಾಯಿಸಿದ್ದಾರೆ. ನೀರಿನಲ್ಲಿದ್ದ ದೋಣಿಯನ್ನಷ್ಟೆ ಪರೀಶೀಲನೆ ಮಾಡುವದಾಗಿ ಅಧಿಕಾರಿ ಉತ್ತರಿಸಿದರು. ಸುಸ್ಥಿತಿಯಲ್ಲಿ ದಡದಲ್ಲಿರುವ ದೋಣಿಯನ್ನು ಪರೀಶೀಲಸಬೇಕು. ದೋಣಿಯ ದಾಖಲೆ ಪತ್ರವನ್ನು ನಾವು ತೋರಿಸಲು ಸಿದ್ದರಿದ್ದೇವೆ ಎಂದು ಮೀನುಗಾರರು ಪಟ್ಟು ಹಿಡಿದರೂ ವೆಂಕಟ್ರಮಣ ಹೆಗಡೆ ಸ್ಪಂದಿಸಿಲ್ಲ. ಮೀನುಗಾರರೊಡನೆ ಮಾತಿಗೆ ಮಾತು ಬೆಳೆದು ಸ್ಥಳದಲ್ಲಿ ಬಿಗುವಿನ ವಾತವರಣ ನಿರ್ಮಾಣವಾಗಿ, ಸಮಯದ ಮೊದಲೆ ಅವರು ಅಲ್ಲಿಂದ ತೆರಳಿದ್ದಾರೆ.
ಇದರಿಂದ ಆಕ್ರೋಶಗೊಂಡ ಮೀನುಗಾರರು ಗುರುವಾರ ಮೀನುಗಾರಿಕೆ ಕಚೇರಿಗೆ ತೆರಳಿ ಬೀಗ ಜಡಿದು ಪ್ರತಿಬಟನೆ ನಡೆಸಿದ್ದಾರೆ. ಯಾವುದೆ ಕಾರಣಕ್ಕೂ ವೆಂಕಟ್ರಮಣ ಹೆಗಡೆಯವರನ್ನು ಭಟ್ಕಳಕ್ಕೆ ಕಳುಹಿಸಬಾರದು. ಸ್ಥಳಕ್ಕೆ ಕಾರವಾರದ ಮೀನುಗಾರಿಕೆ ಉಪನಿರ್ದೇಶಕರು ಬರಬೇಕು ಎಂದು ಪಟ್ಟುಹಿಡಿದಿದ್ದರು.
ಮೀನುಗಾರರ ಒತ್ತಡಕ್ಕೆ ಮಣಿದ ಕಾರವಾರದ ಮೀನುಗಾರಿಕೆ ಉಪನಿರ್ದೇಶಕ ಎಂ.ಎಲ್. ದೊಡ್ಮನಿ ಭಟ್ಕಳಕ್ಕೆ ಭೇಟಿ ನೀಡಿದ್ದು, ಅವರ ದಾಖಲೆಗಳನ್ನು ಪರಿಶೀಲಿಸಿ ಯಾರಿಗೂ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ.
ಈ ಸಂದರ್ಬದಲ್ಲಿ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ವೆಂಕಟೇಶ ಮಾಸ್ತಿ ಮೊಗೇರ, ಸೋಮನಾಥ ಮೊಗೇರ, ವೆಂಕಟೇಶ ಮೊಗೇರ ಹೆರ್ತಾರ, ಬಾಸ್ಕರ ಬೆಳಕೆ, ಗೋಕುಲ ಮುಂಡಳ್ಳಿ, ಮಂಜುನಾಥ ಕರಿಕಲ್, ಭಾಸ್ಕರ ಮೊಗೇರ ಸೇರಿದಂತೆ ಹಲವು ಮೀನುಗಾರ ಮುಖಂಡರು ಉಪಸ್ಥಿತಿರಿದ್ದರು.







