ಮಂಗಳೂರಿನಲ್ಲಿ ‘ಡಾ.ಮೋಹನ್ ಆಳ್ವರೊಂದಿಗೆ ನಾವು’ ಕಾರ್ಯಕ್ರಮ

ಮಂಗಳೂರು, ಆ. 10: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯಾ ಪೂಜಾರಿ ಸಾವು ಪ್ರಕರಣಕ್ಕೆ ಸಂಬಂಧಿಸಿ ಕೆಲವರು ಆಳ್ವಾಸ್ ಶಿಕ್ಷಣ ಸಂಸ್ಥೆಯನ್ನೇ ಹೊಣೆಯನ್ನಾಗಿಸಿ ಬಿಂಬಿಸುತ್ತಿರುವುದನ್ನು ಖಂಡಿಸಿ, ಆಳ್ವಾಸ್ ಶಿಕ್ಷಣ ಸಂಸ್ಥೆಯ ರೂವಾರಿ ಡಾ.ಎಂ.ಮೋಹನ ಆಳ್ವರಿಗೆ ನೈತಿಕ ಬೆಂಬಲ ನೀಡುವ ದೃಷ್ಟಿಯಿಂದ ‘ಡಾ.ಮೋಹನ್ ಆಳ್ವರೊಂದಿಗೆ ನಾವು’ ಸಮಾವೇಶ ನಗರದ ಪುರಭವನದಲ್ಲಿ ನಡೆಯಿತು.
ಸಮಾವೇಶದಲ್ಲಿ ಮಾತನಾಡಿದ ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಷಿ ಅವರು, ಆಳ್ವಾಸ್ ಶಿಕ್ಷಣ ಸಂಸ್ಥೆಯ ಮೂಲಕ ಹಲವು ವಿದ್ಯಾರ್ಥಿಗಳನ್ನು ಬೆಳೆಸಿದ, ಪ್ರೋತ್ಸಾಹ ನೀಡಿದ ವ್ಯಕ್ತಿಯೋರ್ವರನ್ನು ದೂಷಿಸುವುದು, ಅವಮಾನಿಸುವುದು ಸಮಾಜಕ್ಕೆ ಭೂಷಣವಲ್ಲ. ಕಾವ್ಯಾ ಸಾವಿನ ಬಗ್ಗೆ ನಮಗೂ ಬೇಸರವಿದೆ. ಈ ಬಗ್ಗೆ ಸತ್ಯ ಹೊರಬರಬೇಕು. ಆದರೆ, ಇದನ್ನೇ ಮುಂದಿಟ್ಟುಕೊಂಡು ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಹೆಸರನ್ನು ಕೆಡಿಸಲು ಯತ್ನಿಸುವುದು ಉತ್ತಮ ಬೆಳೆವಣಿಗೆಯಲ್ಲಿ ಎಂದರು.
ಆಳ್ವರು ಮೇರು ವ್ಯಕಿತ್ವದವರು. ಅವರು ಯಾವುದೇ ಗ್ರಂಥವನ್ನು ಬರೆಯದಿದ್ದರೂ ಅವರೇ ಒಂದು ಗ್ರಂಥ ಇದ್ದ ಹಾಗೆ. ನೂರಾರು ಮಂದಿ ಬಡವರಿಗೆ ಶಿಕ್ಷಣ ನೀಡಿದ, ಕಲಾವಿದರನ್ನು ಬೆಳೆಸಿದ, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಅದನ್ನು ಪ್ರೋತ್ಸಾಹಿಸುವ ಮೂಲಕ ಮಾದರಿ ವ್ಯಕ್ತಿಯಾಗಿರುವ ಆಳ್ವರಿಗೆ ನೈತಿ ಸ್ಥೈರ್ಯವನ್ನು ತುಂಬಿಸುವ ನಿಟ್ಟಿನಲ್ಲಿ ಸಭೆಯನ್ನು ಹಮ್ಮಿಕೊಂಡಿರುವುದಾಗಿ ಡಾ.ಎಂ.ಪ್ರಭಾಕರ ಜೋಷಿ ಹೇಳಿದರು.
ಆಳ್ವ ವಿರುದ್ಧ ದುರುದ್ದೇಶ ಪೂರಿತ ಅಪ ಪ್ರಚಾರ ಸರಿಯಲ್ಲ. ಸಾಹಿತಿ ಎಂ.ಎಂ.ಕಲಬುರ್ಗಿ ಅವರ ಹತ್ಯೆಯಾದಾಗಲೂ ಇದೇ ರೀತಿಯ ಅಪಪ್ರಚಾರವಿತ್ತು. ಕಾವ್ಯಾ ಪ್ರಕರಣದ ನೈಜ ಅಂಶ ಕೂಡ ಹೊರಬರಲಿದೆ. ಆದರೆ ಸಂಸ್ಥೆಯ ರೂವಾರಿಗಳನ್ನೇ ಬೊಟ್ಟು ಮಾಡಿ ಹೀಯಾಳಿಸುವುದು ಸರಿಯಲ್ಲ ಎಂದವರು ಹೇಳಿದರು.
ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಮಾತನಾಡಿ, ಆಳ್ವರನ್ನು ನಿಂದಿಸಿದವರು ಪಶ್ಚಾತ್ತಾಪಪಡುವ ದಿನ ದೂರವಿಲ್ಲ. ಸತ್ಯಾಂಶ ಹೊರಬರಲಿದೆ. ದೂಷಿಸುವವರಿಗೆ ತಪ್ಪಿನ ಅರಿವಾಗಲಿದೆ ಎಂದರು.
ಅಂತಾರಾಷ್ಟ್ರೀಯ ಕ್ರೀಡಾಪಟು ಸಹನಾ ಕುಮಾರಿ ಮಾತನಾಡಿ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಮೂಲಕ ಸಾವಿರಾರು ಕ್ರೀಡಾಪಟುಗಳು ಹೊರಬಂದಿದ್ದಾರೆ. ರಾಷ್ಟ್ರಮಟ್ಟದಲ್ಲಿ ಸಾಧನೆ ತೋರಿದ ಕ್ರೀಡಾಪಟುವಿಗೆ ರೂ. 25 ಸಾವಿರದಷ್ಟು ಮೊತ್ತ ನೀಡಿ ಪ್ರೋತ್ಸಾಹಿಸುವವರು ಆಳ್ವರವರು. ಇದು ನಮ್ಮ ಜಿಲ್ಲೆಯ ರಾಜ್ಯಕ್ಕೆ ಹೆಮ್ಮೆಯ ವಿಚಾರ. ನಾವು ಆಳ್ವಾರಿಗೆ ಬೆಂಬಲವಾಗಿದ್ದೇವೆ ಎಂದರು.
ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಕರಾವಳಿ ನೃತ್ಯಕಲಾ ಪರಿಷತ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನಾವಡ, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಸಾಂಸ್ಕೃತಿಕ ಸಂಘಟನೆಗಳ ಮುಖಂಡರಾದ ಚಂದ್ರಶೇಖರ ಶೆಟ್ಟಿ, ಡಾ.ವಸಂತ ಕುಮಾರ್ ಪೆರ್ಲ, ಸ್ವರ್ಣ ಸುಂದರ್, ಪುರುಷೋತ್ತಮ ಪೂಜಾರಿ, ದಿನೇಶ್ ಕುಂದರ್, ಶಶಿರಾಜ್ ಕಾವೂರು, ಕಿಶೋರ್ ಡಿ. ಶೆಟ್ಟಿ, ಅಶೋಕ್ ಶೆಟ್ಟಿ, ರಾಮಚಂದರ್ ಬೈಕಂಪಾಡಿ, ಎಂ.ಆರ್.ವಾಸುದೇವ, ಶಶಿಧರ ಶೆಟ್ಟಿ, ನಿತ್ಯಾನಂದ ರಾವ್, ವಸಂತ ಶೆಟ್ಟಿ, ರವಿರಾಜ್ ಶೆಟ್ಟಿ, ವಿಜಯಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.
ಪ್ರತಿಭಟನೆ: ಮೂವರು ಪೊಲೀಸ್ ವಶಕ್ಕೆ
ಕಾರ್ಯಕ್ರಮಕ್ಕೆ ತಡೆ ಒಡ್ಡಲು ಆಗಮಿಸಿದ ಹಿಂದೂ ಮಹಾಸಭಾದ ಕಾರ್ಯಕರ್ತರನ್ನು ಪೊಲೀಸರು ಪುರಭವನದ ಗೇಟಿನ ಬಳಿ ವಶಕ್ಕೆ ತೆಗೆದುಕೊಂಡರು. ತೋಳಿಗೆ ಕಪ್ಪುಪಟ್ಟಿ ಧರಿಸಿ ಕೈಯಲ್ಲಿ ಬಾವುಟ ಹಿಡಿದುಕೊಂಡು ಸಂಘಟನೆಯ ಮುಖಂಡ ರಾಜೇಶ್ ಪುತ್ರನ್ ನೇತೃತ್ವದಲ್ಲಿ ಬಂದ ಕಾರ್ಯಕರ್ತರು ಘೋಷಣೆ ಕೂಗುತ್ತಿದ್ದಂತೆಯೇ ಗೇಟಿನ ಬಳಿ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡರು.







