2022ರೊಳಗೆ ದೇಶದ ಎಲ್ಲ ಮನೆಗಳಿಗೆ ವಿದ್ಯುತ್ ಸಂಪರ್ಕ: ಪಿಯೂಷ್ ಗೋಯಲ್

ಹೊಸದಿಲ್ಲಿ,ಆ.10: 2022,ಆ.15ಕ್ಕೆ ಮುನ್ನ ದೇಶದಲ್ಲಿಯ ಎಲ್ಲ ಮನೆಗಳಿಗೆ ಮತ್ತು ಮುಂದಿನ ವರ್ಷದ ಮಾರ್ಚ್‌ಗೆ ಮೊದಲು ಎಲ್ಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗುವುದು ಎಂದು ವಿದ್ಯುತ್ ಸಚಿವ ಪಿಯೂಷ್ ಗೋಯಲ್ ಅವರು ಗುರುವಾರ ಲೋಕಸಭೆಯಲ್ಲಿ ತಿಳಿಸಿದರು.
ಸರಕಾರವು ಈ ಕಾರ್ಯವನ್ನು ನಿಗದಿತ ಗಡುವಿಗಿಂತ ಬಹಳ ಮೊದಲೇ ಪೂರ್ಣ ಗೊಳಿಸಲಿದೆ ಎಂದು ಪ್ರಕಟಿಸಲು ತನಗೆ ಸಂತೋಷವಾಗುತ್ತಿದೆ ಎಂದೂ ಅವರೂ ಹೇಳಿದರು.
ಪ್ರಶ್ನೆವೇಳೆಯಲ್ಲಿ ಮಾತನಾಡುತ್ತಿದ್ದ ಅವರು, 2012-13ರಲ್ಲಿ ಡಿಸ್ಕಾಮ್‌ಗಳ ಸಂಚಿತ ನಷ್ಟ 2,53,700 ಕೋ.ರೂ.ಗಳಿದ್ದರೆ 2014-15ರಲ್ಲಿ ಅದು 3,60,736 ಕೋ.ರೂ. ಗೇರಿದೆ. ಇದೇ ಅವಧಿಯಲ್ಲಿ ಬಾಕಿಸಾಲಗಳ ಮೊತ್ತ 3,04,228 ಕೋ.ರೂ.ಗಳಿಂದ 4,06,825 ಕೋ.ರೂ.ಗೇರಿದೆ ಎಂದು ತಿಳಿಸಿದರು.
ರಾಜ್ಯ ಸರಕಾರಗಳ ನೆರವಿನೊಂದಿಗೆ ಪರಿಸ್ಥಿತಿಯನ್ನು ಉತ್ತಮಗೊಳಿಸುವ ಆಶಯ ಹೊಂದಿದ್ದೇವೆ ಎಂದರು.
2015,ನವೆಂಬರ್‌ನಲ್ಲಿ ಉಜ್ವಲಾ ಡಿಸ್ಕಾಂ ಭರವಸೆ ಯೋಜನೆ ಆರಂಭಗೊಂಡಾಗಿ ನಿಂದ ಇದರಲ್ಲಿ ಭಾಗಿಯಾಗಿರುವ ರಾಜ್ಯಗಳು 2015-16ರಿಂದ 2016-17ರ ಅವಧಿಯಲ್ಲಿ ವಾರ್ಷಿಕ ನಷ್ಟ ಸುಮಾರು 11,000 ಕೋ.ರೂ.ಗಳಷ್ಟು ಕಡಿಮೆಯಾಗಿದೆ ಎಂದು ತಾತ್ಕಾಲಿಕ ವರದಿಯಲ್ಲಿ ತಿಳಿಸಿವೆ ಎಂದರು.
2012-13 ರಿಂದ 2016-17ರ ಅವಧಿಯಲ್ಲಿ ಎಲ್ಲ ಸಾಂಪ್ರದಾಯಿಕ ಮೂಲಗಳಿಂದ ವಿದ್ಯುತ್ ಉತ್ಪಾದನಾ ಸಾಮರ್ಥ್ಯವು 99209.5 ಮೆಗಾವ್ಯಾಟ್‌ಗಳಷ್ಟು ಹೆಚ್ಚಿಗೆಯಾಗಿದೆ. ಆದರೆ ಡಿಸ್ಕಾಮ್‌ಗಳ ಉತ್ಪಾದನಾ ಸಾಮರ್ಥ್ಯ ಮತ್ತು ನಷ್ಟ ಅಥವಾ ಸಾಲಗಳ ನಡುವೆ ಯಾವುದೇ ಸ್ಥಾಪಿತ ಸಂಬಂಧಗಳಿಲ್ಲ ಎಂದು ಅವರು ತಿಳಿಸಿದರು.







