ಕೂಲಂಕುಷ ಪರಿಶೀಲಿಸಿ ಮುಂದಿನ ಕ್ರಮ: ಸಿಎಂ ಭರವಸೆ
ಲಿಂಗಾಯತ ಮಠಾಧೀಶರ ನಿಯೋಗದಿಂದ ಸಿಎಂ ಭೇಟಿ
ಬೆಂಗಳೂರು, ಆ.10: ಲಿಂಗಾಯತ ಸಮುದಾಯಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನದ ಕುರಿತು ಸಂವಿಧಾನದ ಎಲ್ಲ ಆಯಾಮಗಳಲ್ಲೂ ಕೂಲಂಕಷವಾಗಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಲಿಂಗಾಯತ ಸಮುದಾಯಕ್ಕೆ ಸಾಂವಿಧಾನಿಕ ಮಾನ್ಯತೆಗಾಗಿ ಗುರುವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಸಮಾಲೋಚನ ಸಭೆಯ ಬಳಿಕ ಲಿಂಗಾಯತ ಮಠಾಧೀಶರ ನಿಯೋಗ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿತು.
ಲಿಂಗಾಯತ ಸಮುದಾಯವನ್ನು ಅಲ್ಪಸಂಖ್ಯಾತ ಧರ್ಮ ಎಂದು ಅಧಿಸೂಚನೆ ಹೊರಡಿಸಲು ಹಾಗೂ ಈ ಕುರಿತು ಕೇಂದ್ರ ಸರಕಾರಕ್ಕೆ ಕೂಡಲೆ ಶಿಫಾರಸ್ಸು ಮಾಡಲು ನಿಯೋಗ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿತು.
ಮನವಿ ಸ್ವೀಕರಿಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಲಿಂಗಾಯತ ಸ್ವತಂತ್ರ ಧರ್ಮ ಸ್ಥಾನಮಾನ ಕುರಿತು ಕಾನೂನು ಮತ್ತು ಸಂವಿಧಾನದ ಆಯಾಮಗಳಲ್ಲಿ ಕೂಲಂಕಷವಾಗಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಮೊದಲಿನಿಂದಲೂ ವೀರಶೈವ ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ಬೇಕು ಎಂಬ ಬೇಡಿಕೆ ಇತ್ತು. ಈ ವಿಚಾರದಲ್ಲಿ ವೀರಶೈವ- ಲಿಂಗಾಯತ ಎರಡು ಸಮುದಾಯಗಳೊಡನೆ ಪ್ರತ್ಯೇಕವಾಗಿ ಭಿನ್ನಾಭಿಪ್ರಾಯಗಳಿದ್ದವು. ಈ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಒಂದು ಹೆಸರಿನಲ್ಲಿ ಬೇಡಿಕೆ ಸಲ್ಲಿಸುವಂತೆ ಮನವಿ ಮಾಡಿದ್ದೆ. ಇದೇ ವಿಚಾರದಲ್ಲಿ ಸಿಎಂ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಗುಲ್ಲೆಬ್ಬಿಸಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಸಚಿವರಾದ ಎ.ಬಿ.ಪಾಟೀಲ್, ವಿನಯ್‌ಕುಮಾರ್ ಕುಲಕರ್ಣಿ, ಮಾಜಿ ಮಂತ್ರಿ ಬಸವರಾಜ ಹೊರಟ್ಟಿ, ಪ್ರಕಾಶ ಹುಕ್ಕೇರಿ ಸೇರಿದಂತೆ 50ಕ್ಕೂ ಅಧಿಕ ಮಠಾಧೀಶರು ಇದ್ದರು.







