ಫುಕುಶಿಮ: 2ನೆ ಮಹಾಯುದ್ಧ ಕಾಲದ ಸ್ಫೋಟಗೊಳ್ಳದ ಬಾಂಬ್ ಪತ್ತೆ

ಟೋಕಿಯೊ, ಆ. 10: ಜಪಾನ್‌ನ ಫುಕುಶಿಮ ಪರಮಾಣು ವಿದ್ಯುತ್ ಸ್ಥಾವರದ ಆವರಣದಲ್ಲಿ ಎರಡನೆ ಮಹಾಯುದ್ಧ ಕಾಲದ್ದೆಂದು ಭಾವಿಸಲಾದ ಬಾಂಬೊಂದು ಗುರುವಾರ ಪತ್ತೆಯಾಗಿದೆ.
ಸ್ಥಾವರದ ರಿಯಾಕ್ಟರ್‌ಗಳ ಸಮೀಪ ವಾಹನ ನಿಲುಗಡೆ ಸ್ಥಳ ನಿರ್ಮಿಸಲು ಕಾರ್ಮಿಕರು ನೆಲ ಅಗೆಯುತ್ತಿದ್ದಾಗ 85 ಸೆಂಟಿ ಮೀಟರ್ (2.9 ಅಡಿ) ಉದ್ದದ ವಸ್ತು ಪತ್ತೆಯಾಗಿದೆ.
ಈ ಬಾಂಬನ್ನು ಎರಡನೆ ಮಹಾಯುದ್ಧದ ಅವಧಿಯಲ್ಲಿ ಅಮೆರಿಕದ ಸೇನೆ ಹಾಕಿತ್ತು, ಆದರೆ ಅದು ಸ್ಫೋಟಗೊಂಡಿಲ್ಲ ಎಂದು ಭಾವಿಸಲಾಗಿದೆ.
ಸ್ಥಾವರದ ಆಡಳಿತವು ತಕ್ಷಣ ಕೆಲಸ ನಿಲ್ಲಿಸಿ ಪೊಲೀಸರಿಗೆ ಮಾಹಿತಿ ನೀಡಿದೆ. ಬಾಂಬ್‌ನ ಒಂದು ಕಿಲೋಮೀಟರ್ ತ್ರಿಜ್ಯದಲ್ಲಿ ಜನಸಂಚಾರ ನಿಷೇಧಿಸಲಾಗಿದೆ.
2011ರ ಮಾರ್ಚ್‌ನಲ್ಲಿ ಜಪಾನ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪ ಮತ್ತು ಸುನಾಮಿ ಅಲೆಗಳಿಂದಾಗಿ ಫುಕುಶಿಮ ಅಣು ವಿದ್ಯುತ್ ಸ್ಥಾವರ ಜರ್ಝರಿತವಾಗಿತ್ತು ಎಂಬುದನ್ನು ಸ್ಮರಿಸಬಹುದಾಗಿದೆ.
ಎರಡನೆ ಮಹಾಯುದ್ಧ 1945ರಲ್ಲಿ ಕೊನೆಗೊಂಡಿತ್ತು. 70 ವರ್ಷಗಳ ಬಳಿಕವೂ ಜಪಾನ್‌ನಲ್ಲಿ ಆಗಾಗ ಸ್ಫೋಟಗೊಳ್ಳದ ಬಾಂಬ್‌ಗಳು ಮತ್ತು ಶೆಲ್‌ಗಳು ಪತ್ತೆಯಾಗುತ್ತಿವೆ.





