ರಿಕ್ಷಾ-ಬೈಕ್ ಢಿಕ್ಕಿ: ಮಹಿಳೆ ಮೃತ್ಯು; ಆರು ಮಂದಿಗೆ ಗಾಯ

ಬಂಟ್ವಾಳ, ಆ. 10: ರಿಕ್ಷಾ ಮತ್ತು ಬೈಕ್ ನಡುವೆ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟು, ಆರು ಮಂದಿ ಗಾಯಗೊಂಡ ಘಟನೆ ಮೆಲ್ಕಾರ್ ಸಮೀಪದ ಮಾರ್ನಬೈಲು ಎಂಬಲ್ಲಿ ಗುರುವಾರ ಸಂಜೆ ನಡೆದಿದೆ.
ಮೃತರನ್ನು ರಿಕ್ಷಾದಲ್ಲಿ ಸಜಿಪ ನಿವಾಸಿ ರುಖ್ಯಾ (32) ಎಂದು ಗುರುತಿಸಲಾಗಿದೆ.
ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಅಬ್ದುಲ್ ಹಕೀಂ, ಪದ್ಮಾವತಿ, ರಿಝ್ವಾನ್, ಸಂಶೀರ ಹಾಗೂ ಬೈಕ್ ಸವಾರ ಫಾರಿಶ್, ಸಹಸವಾರ ಸುನಿಲ್ ಎಂಬವರಿಗೆ ಗಂಭೀರ ಗಾಯಗಳಾಗಿವೆ.
ಬೈಕಿನಲ್ಲಿದ್ದ ಫರಂಗಿಪೇಟೆ ನಿವಾಸಿ ಮೆಲ್ಕಾರ್ ಕಡೆಗೆ ತನ್ನ ಸ್ನೇಹಿತ ಸುನಿಲ್ ಜೊತೆಗೆ ಹೋಗುತ್ತಿದ್ದ ವೇಳೆ ಮಾರ್ನಬೈಲ್ ಸಮೀಪ ಮೆಲ್ಕಾರ್ ಕಡೆಯಿಂದ ಬಂದ ರಿಕ್ಷಾವನ್ನು ಅದರ ಚಾಲಕ ಏಕಾಏಕಿ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಚಲಾಯಿಸಿ ಬೈಕಿಗೆ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದ್ದು, ಈ ವೇಳೆ ರಿಕ್ಷಾ ಮಗುಚಿ ಬಿದ್ದಿದ್ದು, ರುಖ್ಯಾ ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ರಿಕ್ಷಾ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಗಾಯಾಳುಗಳನ್ನು ಬಂಟ್ವಾಳ ಹಾಗೂ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಟ್ವಾಳ ಸಂಚಾರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ರಿಕ್ಷಾವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.





