ಗಾಂಜಾ ಮಾರಾಟ: ಇಬ್ಬರು ವಶಕ್ಕೆ
ಮಂಗಳೂರು, ಆ. 10: ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಗಾಂಜಾ ಸಹಿತ ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸಾಲೆತ್ತೂರು ಕುಚ್ಚಿನಡ್ಕ ಕಾಡುಮಠ ನಿವಾಸಿ ಮುಹಮ್ಮದ್ ಅಶ್ರಫ್ (37) ಹಾಗೂ ಇರಾ ಗ್ರಾಮದ ಮನೆವಾರ್ತೆ ಕೋಡಿ ಹೌಸ್ ನಿವಾಸಿ ಜಾಫರ್ ಶರೀಫ್ (32) ಬಂಧಿತ ಆರೋಪಿಗಳು.
ಆರೋಪಿಗಳಿಂದ 500 ಗ್ರಾಂ ಗಾಂಜಾ, ದ್ವಿಚಕ್ರ ವಾಹನ, 2 ಮೊಬೈಲ್ ಫೋನ್, 580 ನಗದು ಸಹಿತ ಒಟ್ಟು 48,080 ರೂ. ವೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಮುಡಿಪು ಜಂಕ್ಷನ್ ಬಳಿಯಿರುವ ಬಾರ್ ಎದುರುಗಡೆಯ ರಸ್ತೆ ಬದಿಯಲ್ಲಿ ಇಬ್ಬರು ಯುವಕರು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳು ಗಾಂಜಾವನ್ನು ಕೋಲಾರ ಕಡೆಯಿಂದ ಖರೀದಿ ಮಾಡಿ ಮಂಗಳೂರು ನಗರದಲ್ಲಿ ಮಾರಾಟ ಮಾಡಲು ತಂದಿದ್ದರು. ಆರೋಪಿಗಳ ಪೈಕಿ ಅಶ್ರಫ್ ಎಂಬಾತನ ವಿರುದ್ಧ ಈ ಹಿಂದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಗಾಂಜಾ ಮಾರಾಟಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿತ್ತು.
ಇನ್ನೋರ್ವ ಆರೋಪಿ ಜಾಫರ್ ಶರೀಫ್ ವಿರುದ್ಧ ಈ ಹಿಂದೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಗ್ಯಾಸ್ ಸಿಲಿಂಡರ್ ಕಳವುಗೈದ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಕೊಣಾಜೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಸಿಸಿಬಿ ಘಟಕದ ಇನ್‌ಸ್ಪೆಕ್ಟರ್ ಸುನೀಲ್ ವೈ. ನಾಯ್ಕ್ ಮತ್ತು ಪಿಎಸ್‌ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.







