ರೈತಪರ ಹೋರಾಟಕೆ್ಕ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಸಜ್ಜು
ಉಡುಪಿ, ಆ.10: ರೈತರ ಬಗ್ಗೆ ರಾಜ್ಯ ಸರಕಾರ ತೋರುತ್ತಿರುವ ಅಸಹಕಾರ ಧೋರಣೆ, ಸ್ಥಳೀಯವಾಗಿ ರೈತರು ಅನುಭವಿಸುವ ತೊಂದರೆಗಳ ಕುರಿತಂತೆ ಸರಕಾರದ ಗಮನ ಸೆಳೆಯಲು ಪ್ರತಿ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಹೋರಾಟವನ್ನು ರೂಪಿಸಲು ಜಿಲ್ಲಾ ಬಿಜೆಪಿ ರೈತ ಮೋರ್ಚಾ ನಿರ್ಧರಿಸಿದೆ.
ಬಿಜೆಪಿ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಮುಟ್ಲುಪಾಡಿ ಸತೀಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಮೋರ್ಚಾದ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ವಿಶೇಷವಾಗಿ ಕಾಡು ಪ್ರಾಣಿಗಳ ಹಾವಳಿ ಯಿಂದಾಗಿ ರೈತರು ಅನುಭವಿಸುತ್ತಿರುವ ಕಷ್ಟ-ನಷ್ಟಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿ ಜಿಲ್ಲಾಡಳಿತ ಕೂಡಲೇ ಸ್ಪಂದಿಸಬೇಕೆಂದು ಒತ್ತಾಯಿಸುವ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಈ ಸಲವೂ ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆ ಇದೆ. ಉಡುಪಿ ಜಿಲ್ಲೆಯಲ್ಲಿಯೂ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದೆ. ಜಿಲ್ಲೆಯಲ್ಲಿ ಎರಡನೇ ಬೆಳೆಯಾದ ಧಾನ್ಯ ಮತ್ತು ಸುಗ್ಗಿಬೆಳೆಯನ್ನು ನಿರೀಕ್ಷಿಸುವಂತಿಲ್ಲ ಎಂದು ತಿಳಿಸಿದ ಮೋರ್ಚಾದ ಜಿಲ್ಲಾ ಉಸ್ತುವಾರಿ ಕಟಪಾಡಿ ಶಂಕರ ಪೂಜಾರಿ, ಪ್ರತೀ ಗ್ರಾಮದಲ್ಲಿ ರೈತರನ್ನು ಗುರುತಿಸಿ,ಸ್ಥಳೀಯ ಪತ್ತಿನ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿದರದಲ್ಲಿ ಅಲ್ಪಾವಧಿ ಬೆಳೆ ಸಾಲ ಪಡೆದುಕೊಳ್ಳುವ ಕುರಿತು ಹಾಗೂ ಕೇಂದ್ರ ಸರಕಾರ ರೈತರಿಗೆ ಜಾರಿಗೊಳಿಸಿದ ಬೆಳೆ ವಿಮೆ ಸಹಿತ ಅನೇಕ ಯೋಜನೆಗಳ ಬಗೆ ಮಾಹಿತಿ ನೀಡುವ ಕಾರ್ಯಕ್ರಮವನ್ನು ರೈತ ಮೋರ್ಚಾ ಮಾಡಬೇಕೆಂದು ಹೇಳಿದರು.
ಶ್ರೀನಿವಾಸ ಶರ್ಮಾ ಪಡುಬಿದ್ರಿ, ನಾಗರಾಜ್ ಶೆಟ್ಟಿ ಕುಂಜೂರು, ಧೀರಜ್ ಕುಮಾರ್ ಕೆ.ಎಸ್. ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು. ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಉಪ್ಪೂರು ವಂದಿಸಿದರು.







