‘ದಿವ್ಯಾಂಗ’ರಿಗಾಗಿ ಸಂಜ್ಞಾ ಭಾಷೆಯಲ್ಲಿ ರಾಷ್ಟ್ರಗೀತೆ ವೀಡಿಯೊ

ಹೊಸದಿಲ್ಲಿ, ಆ. 10: ಸಂಜ್ಞಾ ಭಾಷೆಯಲ್ಲಿರುವ ರಾಷ್ಟ್ರಗೀತೆಯ ಹೊಸ ವೀಡಿಯೋವನ್ನು ಗುರುವಾರ ಲೋಕಾರ್ಪಣೆಗೊಳಿಸಿರುವ ಕೇಂದ್ರ ಸಚಿವ ಮಹೇಂದ್ರ ನಾಥ್ ಪಾಂಡೆ, ಭಿನ್ನ ಸಾಮರ್ಥ್ಯರ ಹಾಗೂ ಇತರರ ಅಸಮಾನತೆ ಅಳಿಸಿ ಹಾಕಲು ‘ವಿಕಲಾಂಗ’ದ ಬದಲು ‘ದಿವ್ಯಾಂಗ’ ಪದ ಬಳಸಲು ಸರಕಾರ ನಿರ್ಧರಿಸಿದೆ ಎಂದರು.
ದಿವ್ಯಾಂಗರಿಗಾಗಿ ಸಂಜ್ಞಾ ಭಾಷೆಯಲ್ಲಿ ರಾಷ್ಟ್ರಗೀತೆ ರೂಪಿಸಿರುವುದು ನಮಗೆ ಹೆಮ್ಮೆ ಎನಿಸುತ್ತದೆ. ಭಿನ್ನ ಸಾಮರ್ಥ್ಯರ ವರ್ಗದಲ್ಲಿ ಬರುವ ಜನರಿಗೆ ನಾವು ವಿಕಲಾಂಗರು ಎಂಬ ಪದ ಬಳಸುತ್ತಿದ್ದೆವು. ಆದರೆ, ಈಗ ಸರಕಾರ ದಿವ್ಯಾಂಗ ಎಂಬ ಪದ ಬಳಸಲು ನಿರ್ಧರಿಸಿದೆ ಎಂದರು.
ಈ 3.35 ನಿಮಿಷದ ವೀಡಿಯೊವನ್ನು ಗೋವಿಂದ ನಿಹಾಲಾನಿ ನಿರ್ದೇಶಿಸಿದ್ದಾರೆ. ಬಾಲಿವುಡ್ ನಟ ಅಮಿತಾಬ್ ಬಚ್ಚನ್‌ರೊಂದಿಗೆ ದಿವ್ಯಾಂಗರು ನಟಿಸಿದ್ದಾರೆ. ಕೆಂಪು ಕೋಟೆಯ ಹಿನ್ನೆಲೆಯಲ್ಲಿ ಚಿತ್ರೀಕರಿಸಲಾಗಿದೆ ಎಂದು ಅವರು ತಿಳಿಸಿದರು.
ಭಾರತ ಪ್ರಾಚೀನ ದೇಶ. ಪ್ರಾಚೀನ ಕಾಲದಲ್ಲಿ ಸಂಜ್ಞಾ ಭಾಷೆ ಬಳಸುತ್ತಿದ್ದರು ಎಂದು ಅವರು ಹೇಳಿದರು.
ಈ ವಿಡಿಯೋವನ್ನು ಗೋವಾ, ಭೋಪಾಲ್, ಚಂಡಿಗಡ ಹಾಗೂ ಕೊಲ್ಲಾಪುರದಲ್ಲಿ ಕೂಡ ಲೋಕಾರ್ಪಣೆಗೊಳಿಸಲಾಗಿದೆ.





