ಪನಾಮಾ ದಾಖಲೆಗಳ ತನಿಖೆ ಪ್ರಗತಿಯಲ್ಲಿದೆ,ಆದರೆ ಪಾಕ್ ಮಾದರಿಯನ್ನು ಅನುಸರಿಸುವುದಿಲ್ಲ: ಅರುಣ್ ಜೇಟ್ಲಿ

ಹೊಸದಿಲ್ಲಿ,ಆ.10: ಗುರುವಾರ ರಾಜ್ಯಸಭೆಯಲ್ಲಿ ಪನಾಮಾ ದಾಖಲೆಗಳ ಹಣೆಬರಹ ಕುರಿತಂತೆ ಪ್ರಶ್ನೆಗಳಿಗೆ ಉತ್ತರಿಸಿದ ಸರಕಾರವು, ಸೋರಿಕೆಯಾದ ದಾಖಲೆಗಳಲ್ಲಿ ಹೆಸರಿಸ ಲಾಗಿರುವ ಪ್ರತಿ ಖಾತೆಯ ಕುರಿತೂ ತನಿಖೆ ನಡೆಯುತ್ತಿದೆ ಎಂದು ತಿಳಿಸಿತು. ಆದರೆ ಪಾಕಿಸ್ತಾನದಲ್ಲಿ ಪ್ರಧಾನಿ ಹುದ್ದೆಯಿಂದ ನವಾಝ್ ಶರೀಫ್‌ರನ್ನು ವಜಾಗೊಳಿಸಿರುವಂತೆ ಸೂಕ್ತ ಪ್ರಕ್ರಿಯೆಯಿಲ್ಲದೆ ಇಲ್ಲಿ ಯಾರನ್ನೂ ದಂಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿತು.
ಬಹಿರಂಗಗೊಂಡಿರುವ ವಿದೇಶಿ ಬ್ಯಾಂಕ್ ಖಾತೆಗಳ ಕುರಿತು ಈ ಸರಕಾರವು ತೆಗೆದುಕೊಂಡಿರುವ ಕ್ರಮಗಳಿಗಿಂತ ಹೆಚ್ಚಿನ ಕ್ರಮಗಳನ್ನು ಯಾರೂ ಎಂದೂ ತೆಗೆದುಕೊಂಡಿಲ್ಲ ಎಂದು ಬ್ಯಾಂಕಿಂಗ್ ನಿಯಂತ್ರಣ(ತಿದ್ದುಪಡಿ) ಮಸೂದೆಯ ಮೇಲಿನ ಚರ್ಚೆಗೆ ಉತ್ತರಿಸುತ್ತಿದ್ದ ವಿತ್ತಸಚಿವ ಅರುಣ್ ಜೇಟ್ಲಿ ತಿಳಿಸಿದರು. ಮಸೂದೆಯನ್ನು ಸದನವು ನಂತರ ಅಂಗೀಕರಿಸಿತು.
ಪನಾಮಾ ದಾಖಲೆಗಳ ಸೋರಿಕೆಯನ್ನು ಪ್ರಸ್ತಾಪಿಸಿದ ಅವರು, ಅದರಲ್ಲಿಯ ಪ್ರತಿಯೊಂದೂ ಖಾತೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದರು.
ನಮ್ಮಲ್ಲಿ ಕಾನೂನಿನ ಆಡಳಿತವಿದೆ. ವ್ಯಕ್ತಿಯನ್ನು ಮೊದಲು ವಜಾಗೊಳಿಸಿ ಬಳಿಕ ವಿಚಾರಣೆ ನಡೆಸುವ ನೆರೆಯ ರಾಷ್ಟ್ರದಲ್ಲಿರುವ ಪದ್ಧತಿ ನಮ್ಮಲ್ಲಿಲ್ಲ ಎಂದು ಅವರು ಪನಾಮಾ ದಾಖಲೆಗಳಿಗೆ ಸಂಬಂಧಿಸಿದಂತೆ ಕಳೆದ ತಿಂಗಳು ನವಾಝ್ ಶರೀಫ್‌ರನ್ನು ಪಾಕಿಸ್ತಾನದ ಪ್ರಧಾನಿ ಹುದ್ದೆಯಿದ ವಜಾಗೊಳಿಸಿದ್ದನ್ನು ಸ್ಪಷ್ಟವಾಗಿ ಪ್ರಸ್ತಾಪಿಸಿ ಹೇಳಿದರು.
ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯವು ಶರೀಫ್‌ರನ್ನು ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯಲು ಅನರ್ಹಗೊಳಿಸಿತ್ತು ಮತ್ತು ಪನಾಮಾ ದಾಖಲೆಗಳ ಹಗರಣಕ್ಕೆ ಸಂಬಂಧಿಸಿದಂತೆ ಅವರ ಮತ್ತು ಅವರ ಮಕ್ಕಳ ವಿರುದ್ಧ ಭ್ರಷ್ಟಾಚಾರ ಪ್ರಕರಣಗಳನ್ನು ದಾಖಲಿಸುವಂತೆ ಆದೇಶಿಸಿತ್ತು.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಪನಾಮಾ ದಾಖಲೆಗಳ ಸೋರಿಕೆಗೆ ಸಂಬಂಧಿಸಿದಂತೆ ಇಲ್ಲಿ ತನಿಖೆಯ ಸ್ಥಿತಿಗತಿ ಕುರಿತಂತೆ ಪ್ರಶ್ನೆಗಳನ್ನು ಎತ್ತಲಾಗಿತ್ತು.
ತೆರಿಗೆ ಅಧಿಕಾರಿಗಳು ತನಿಖೆಗಳನ್ನು ನಡೆಸುತ್ತಿದ್ದಾರೆ. ಅಗತ್ಯ ದಾಖಲೆಗಳು ಲಭಿಸಿದ ಪ್ರಕರಣಗಳಲ್ಲಿ ಕಾನೂನು ಕ್ರಮಗಳನ್ನು ಆರಂಭಿಸಲಾಗುತ್ತಿದೆ ಎಂದು ಜೇಟ್ಲಿ ತಿಳಿಸಿದರು.
ತನಿಖೆ ನಡೆಯುತ್ತಿರುವವರೆಗೂ ಹೆಸರುಗಳ ಗೋಪ್ಯತೆಯನ್ನು ಕಾಯ್ದುಕೊಳ್ಳಲಾಗುತ್ತದೆ ಮತ್ತು ಪ್ರಕರಣವು ನ್ಯಾಯಾಲಯವವನ್ನು ತಲುಪಿದಾಗ ಈ ಗೋಪ್ಯತೆ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ ಎಂದರು.







