ಸಿಬಿಎಸ್‌ಇಗೆ ಸುಪ್ರೀಂ ಕೋರ್ಟ್ ಛೀಮಾರಿ
ನೀಟ್: ಪ್ರಾದೇಶಿಕ ಭಾಷೆಗಳಿಗೆ ವಿಭಿನ್ನ ಪ್ರಶ್ನೆಪತ್ರಿಕೆ

ಹೊಸದಿಲ್ಲಿ, ಆ. 10: ಪ್ರಾದೇಶಿಕ ಭಾಷೆಗಳಲ್ಲಿ ನೀಟ್ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ವಿಭಿನ್ನ ಪ್ರಶ್ನೆ ಪತ್ರಿಕೆ ರೂಪಿಸಿದ ಸಿಬಿಎಸ್‌ಇಗೆ ಸುಪ್ರೀಂ ಕೋರ್ಟ್ ಗುರುವಾರ ಛೀಮಾರಿ ಹಾಕಿದೆ.
ಎಲ್ಲ ನೀಟ್ ಪರೀಕ್ಷೆಗಳಿಗೆ ಸಮಾನ ಪ್ರಶ್ನೆಪತ್ರಿಕೆ ರೂಪಿಸಬೇಕು ಎಂದು ಸುಪ್ರೀಂ ಕೋರ್ಟ್ ಸಿಬಿಎಸ್‌ಇಗೆ ನಿರ್ದೇಶನ ನೀಡಿದೆ.
2017 ಮೇ 17ರಂದು ಆಯೋಜಿಸಲಾದ ನೀಟ್-2017 ಪರೀಕ್ಷೆಗೆ ಸಿಬಿಎಸ್‌ಇ ಪ್ರಾದೇಶಿಕ ಭಾಷೆಗಳಲ್ಲಿ ಪ್ರಶ್ನೆ ಪತ್ರಿಕೆ ಮುದ್ರಿಸಿತ್ತು. ಈ ಪರೀಕ್ಷೆಯಲ್ಲಿ ಇಂಗ್ಲಿಷ್ ಹಾಗೂ ಹಿಂದಿಯ ಪ್ರಶ್ನೆಪತ್ರಿಕೆಯ ಪ್ರಶ್ನೆಗಳಿಗಿಂತ ಪ್ರಾದೇಶಿಕ ಭಾಷೆಯ ಪ್ರಶ್ನೆ ಪತ್ರಿಕೆ ಕ್ಲಿಷ್ಟವಾಗಿದ್ದುವು. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಗುಜರಾತಿ ಮಾಧ್ಯಮದಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳು ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಸಿಬಿಎಸ್‌ಇ ಮೇ 7ರಂದು ನಡೆಸಿದ ಪರೀಕ್ಷೆ ರದ್ದುಗೊಳಿಸುವಂತೆ ಹಾಗೂ ಇಂಗ್ಲಿಷ್ ಗುಜರಾತಿ ಭಾಷೆಯಲ್ಲಿ ಸಮಾನ ಪ್ರಶ್ನೆ ಪತ್ರಿಕೆ ರೂಪಿಸಿ ಪರೀಕ್ಷೆ ನಡೆಸುವಂತೆ ಆಗ್ರಹಿಸಿದ್ದರು.
ವೃತ್ತಿಪರ ಕೋರ್ಸ್‌ಗಳಿಗೆ ಸೇರಲು ಪರೀಕ್ಷೆ ಉತ್ತೀರ್ಣರಾದ ಆರು ಲಕ್ಷ ಅಭ್ಯರ್ಥಿ ಗಳಿಗೆ ತೊಂದರೆ ಆಗುತ್ತದೆ ಎಂಬ ಕಾರಣಕ್ಕೆ ಉಚ್ಚ ನ್ಯಾಯಾಲಯ ಜುಲೈ 14ರಂದು ನೀಟ್ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿತ್ತು.
ನೀಟ್ ಪರೀಕ್ಷೆ ಬರೆಯುವ ಪ್ರಾದೇಶಿಕ ಭಾಷೆಯ ವಿದ್ಯಾರ್ಥಿಗಳಿಗೆ ವಿಭಿನ್ನ ಪ್ರಶ್ನೆ ಪತ್ರಿಕೆ ರೂಪಿಸಿದ ಸಿಬಿಎಸ್‌ಇಗೆ ಸುಪ್ರೀಂ ಕೋರ್ಟ್ ಗುರುವಾರ ಛೀಮಾರಿ ಹಾಕಿದೆ. ಎಲ್ಲ ನೀಟ್ ಪರೀಕ್ಷೆಗಳಿಗೂ ಸಮಾನ ಪ್ರಶ್ನೆ ಪತ್ರಿಕೆ ರೂಪಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.







