ಕಾಶ್ಮೀರದಲ್ಲಿ 370ನೇ ವಿಧಿಗೆ ವಿದಾಯ ಹೇಳುವ ಕಾಲ ಬಂದಿದೆ: ಜಮ್ಮು-ಕಾಶ್ಮೀರ ಬಿಜೆಪಿ ವಕ್ತಾರ

ಶ್ರೀನಗರ, ಆ.10: ಸಂವಿಧಾನದ 370ನೇ ವಿಧಿಯು ‘ಪ್ರತ್ಯೇಕತಾ ಭಾವ’ ಮೂಡಲು ಕಾರಣವಾಗಿದ್ದು ಜಮ್ಮು-ಕಾಶ್ಮೀರ ರಾಜ್ಯದ ಜನರು ಇದಕ್ಕೆ ವಿದಾಯ ಹೇಳುವ ಕಾಲ ಬಂದಿದೆ ಎಂದು ಜಮ್ಮು-ಕಾಶ್ಮೀರ ಬಿಜೆಪಿ ಘಟಕದ ವಕ್ತಾರ ವೀರೇಂದರ್ ಗುಪ್ತ ಹೇಳಿದ್ದಾರೆ.
ಇದರ ಜೊತೆಗೆ 35ಎ ವಿಧಿಯೂ ರಾಜ್ಯದ ಜನತೆಗೆ ಒಳಿತಿಗಿಂತ ಕೆಡುಕಿಗೇ ಕಾರಣವಾಗಿದೆ. ಈ ಎರಡು ವಿಧಿಗಳು ಅಭಿವೃದ್ಧಿ ಮತ್ತು ಪ್ರಗತಿಗೆ ತಡೆಯಾಗಿದ್ದು ಭಾರೀ ಹಾನಿ ಎಸಗಿದೆ ಎಂದವರು ಹೇಳಿದ್ದಾರೆ.
ಸಂವಿಧಾನದ 370ನೇ ವಿಧಿಯು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದರೆ, 35ಎ ವಿಧಿಯು ಕಾಯಂ ಪ್ರಜೆಗಳನ್ನು ನಿರ್ಧರಿಸುವ ಹಕ್ಕನ್ನು ರಾಜ್ಯ ವಿಧಾನಸಭೆಗೆ ನೀಡಿದೆ.
ಕಾಶ್ಮೀರದಲ್ಲಿ ಸದ್ಯದ ಪರಿಸ್ಥಿತಿ ಗಮನಿಸಿದರೆ, 370ನೇ ವಿಧಿಯು ಪ್ರತ್ಯೇಕತಾ ಮನಸ್ಥಿತಿ ಗೆ ಕಾರಣವಾಗಿದೆಯಲ್ಲದೆ ಪ್ರತ್ಯೇಕತಾವಾದದ ಹುಟ್ಟಿಗೆ ಮೂಲವಾಗಿರುವುದು ವೇದ್ಯವಾಗುತ್ತದೆ. ಈ ವಿಧಿಯು ಕಾಶ್ಮೀರ ಸಮಸ್ಯೆಯನ್ನು ಜೀವಂತವಾಗಿರಿಸಿದೆ ಮತ್ತು ಭಾರತದ ಆಂತರಿಕ ವಿಷಯದಲ್ಲಿ ಮಧ್ಯಪ್ರವೇಶಿಸಲು ಪ್ರತ್ಯೇಕತಾವಾದಿಗಳಿಗೆ ಮತ್ತು ಬಾಹ್ಯಶಕ್ತಿಗಳಿಗೆ ಪ್ರೋತ್ಸಾಹ ನೀಡುತ್ತಿದೆ . ಅಲ್ಲದೆ ಇದು ಕಾಶ್ಮೀರದ ಜನರನ್ನು ರಾಷ್ಟ್ರೀಯ ಮುಖ್ಯವಾಹಿನಿಯಿಂದ ದೂರಗೊಳಿಸಿ ಅವರಲ್ಲಿ ಬದಲಾವಣೆ ಮೂಡಿಸಲು ಕಾರಣವಾಗಿದೆ ಎಂದವರು ಅಭಿಪ್ರಾಯಪಟ್ಟರು. ಕಾಶ್ಮೀರದ ಮುಖಂಡರು ತಮ್ಮ ಸ್ಥಾಪಿತ ರಾಜಕೀಯ ಹಿತಾಸಕ್ತಿಯ ಕಾರಣಕ್ಕೆ 370ನೇ ವಿಧಿಯ ಹೆಸರಲ್ಲಿ ಜನರನ್ನು ಶೋಷಿಸುತ್ತಿದ್ದಾರೆ. ಅಲ್ಲದೆ ಇದೇ ಕಾರಣದಿಂದ ಉದ್ಯಮಿಗಳು ರಾಜ್ಯದಲ್ಲಿ ಉದ್ಯಮ ಸ್ಥಾಪಿಸಲು ಹಿಂದೇಟು ಹಾಕುತ್ತಿದ್ದಾರೆ. ಜೊತೆಗೆ ಕಾಶ್ಮೀರ ಕಣಿವೆಯ ಜನತೆ ಹಾಗೂ ಜಮ್ಮು ಮತ್ತು ಲಡಾಕ್ ಜನತೆಯ ಮಧ್ಯೆ ಅಪನಂಬಿಕೆಯ ಭಾವನೆ ಬೆಳೆಯಲೂ ಇದು ಕಾರಣವಾಗಿದೆ. ಅಲ್ಲದೆ 35ಎ ವಿಧಿಯು ರಾಜ್ಯದ ಪ್ರಜೆಗಳು ಎನಿಸಿಕೊಳ್ಳುವ ಹಕ್ಕಿನ ವಿಷಯದಲ್ಲಿ ಪುರುಷರು ಮತ್ತು ಮಹಿಳೆಯರ ಮಧ್ಯೆ ಭೇದಭಾವ ತೋರಿ ಅವರನ್ನು ಬೇರ್ಪಡಿಸಿದೆ. ಆದ್ದರಿಂದ ಈ ಎರಡೂ ವಿಧಿಗಳಿಗೆ ವಿದಾಯ ಹೇಳಬೇಕಿದೆ ಎಂದು ಗುಪ್ತ ಹೇಳಿದರು.







