ಕುಂಭಕೋಣಂ ಶಾಲೆ ಅಗ್ನಿದುರಂತ ಪ್ರಕರಣ: ಶಿಕ್ಷೆ ಅಮಾನತು ವಿರುದ್ಧ ಮೇಲ್ಮನವಿ ಸಲ್ಲಿಸಲು ಆಗ್ರಹ

ತಂಜಾವೂರು, ಆ.11: ಕುಂಭಕೋಣಂ ಶಾಲೆಯಲ್ಲಿ 2004ರಲ್ಲಿ ನಡೆದಿದ್ದ ಅಗ್ನಿ ದುರಂತ ಪ್ರಕರಣದ 7 ಆರೋಪಿಗಳಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಅಮಾನತುಗೊಳಿಸಿರುವ ಮದ್ರಾಸ್ ಹೈಕೋರ್ಟ್‌ನ ಆದೇಶದ ಬಗ್ಗೆ ಸಂತ್ರಸ್ತ ವಿದ್ಯಾರ್ಥಿಗಳ ಪೋಷಕರು ಆಘಾತ ವ್ಯಕ್ತಪಡಿಸಿದ್ದು, ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವಂತೆ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.
ಶಿಕ್ಷೆಯನ್ನು ಮಾರ್ಪಾಟು ಮಾಡಿರುವುದರಿಂದ ತಮಗೆ ಆಘಾತವಾಗಿದೆ . ದುರಂತ ನಡೆದ 10 ವರ್ಷದ ಬಳಿಕ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ ಎಂದು ಪೋಷಕರ ಹಿತಚಿಂತನೆಯ ಸಂಘದ ಕಾರ್ಯದರ್ಶಿ ಇನ್ಬರಾಜ್ ಹೇಳಿದ್ದಾರೆ. ಅಗ್ನಿದುರಂತದಲ್ಲಿ ಇವರ ಇಬ್ಬರು ಮಕ್ಕಳು ಬಲಿಯಾಗಿದ್ದರು. ರಾಜ್ಯ ಸರಕಾರ ಮೇಲ್ಮನವಿ ಸಲ್ಲಿಸದಿದ್ದರೆ ನಾವು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತೇವೆ ಎಂದವರು ಹೇಳಿದ್ದಾರೆ.
ಪ್ರಕರಣದಲ್ಲಿ ತೀರ್ಪು ಪ್ರಕಟವಾದಾಗಲೇ ಸಾಕಷ್ಟು ವಿಳಂಬವಾಗಿತ್ತು. ಇದೀಗ ಜಾರಿಯಾದ ಶಿಕ್ಷೆಯನ್ನೂ ಅಮಾನತುಗೊಳಿಸಲಾಗಿದೆ. ಆಪಾದಿತರು ಜೈಲಿನಿಂದ ಹೊರಬಂದರೆ ಅದು ಕರ್ತವ್ಯ ನಿರ್ವಹಿಸದ ಇತರರಿಗೂ ಪ್ರೇರಣೆಯಾದೀತು. ಆದ್ದರಿಂದ ರಾಜ್ಯ ಸರಕಾರ ಮೇಲ್ಮನವಿ ಸಲ್ಲಿಸಬೇಕು ಎಂದು ದುರಂತದಲ್ಲಿ ತಮ್ಮ ಮಕ್ಕಳನ್ನು ಕಳೆದುಕೊಂಡಿರುವ ಮಹೇಶ್ ಮತ್ತು ಶಾಂತಿ ಎಂಬವರು ಹೇಳಿದ್ದಾರೆ.
ಶ್ರೀಕೃಷ್ಣ ಮೆಟ್ರಿಕ್ಯುಲೇಷನ್ ಶಾಲೆಯಲ್ಲಿ ಸಂಭವಿಸಿದ್ದ ಈ ಅಗ್ನಿದುರಂತದಲ್ಲಿ 94 ವಿದ್ಯಾರ್ಥಿಗಳು ಮೃತಪಟ್ಟಿದ್ದರು. ಘಟನೆಗೆ ಸಂಬಂಧಿಸಿ ಒಟ್ಟು 21 ಮಂದಿಯ ವಿರುದ್ಧ ಐಪಿಸಿ ಸೆಕ್ಷನ್‌ನಡಿ ಪ್ರಕರಣ ದಾಖಲಿಸಲಾಗಿದ್ದು ಇವರಲ್ಲಿ 11 ಮಂದಿಯನ್ನು ಬಿಡುಗಡೆಗೊಳಿಸಲಾಗಿತ್ತು. 10 ಮಂದಿ ಅಪರಾಧಿಗಳಲ್ಲಿ ಶಾಲೆಯ ಸಂಸ್ಥಾಪಕ ‘ಪುಳವರ್ ’ ಪಳನಿಸ್ವಾಮಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಈತ ತನಿಖೆ, ವಿಚಾರಣೆ ಸಂದರ್ಭ ಹಾಗೂ ದೋಷಿಯೆಂದು ಸಾಬೀತಾದ ಬಳಿಕ ಜೈಲಿನಲ್ಲಿ ಕಳೆದ ಅವಧಿಯನ್ನು ಶಿಕ್ಷೆಯ ಅವಧಿ ಎಂದು ಪರಿಗಣಿಸಿತ್ತು. ಅಲ್ಲದೆ ದಂಡದ ಮೊತ್ತವನ್ನು 1,16,500 ರೂ. ಎಂದು ಬದಲಾಯಿಸಿತ್ತು.
ಅಪರಾಧಿಗಳಲ್ಲಿ ಏಳು ಮಂದಿಯ ಶಿಕ್ಷೆಯನ್ನು ಗುರುವಾರ ಹೈಕೋರ್ಟ್ ಅಮಾನುತುಗೊಳಿಸಿತ್ತು. ಅಲ್ಲದೆ ಇಬ್ಬರು ಅಪರಾಧಿಗಳ ಶಿಕ್ಷೆಯ ಪ್ರಮಾಣವನ್ನು ಬದಲಾಯಿಸಿತ್ತು ಮತ್ತು ಓರ್ವ ಅಪರಾಧಿ ಮೃತಪಟ್ಟಿರುವ ಕಾರಣ ಈತನ ಶಿಕ್ಷೆಯನ್ನು ಅಂತ್ಯಗೊಳಿಸಿತ್ತು.







