ಖಾಸಗಿ ಬಸ್‌ಗಳು ಹೆಚ್ಚುವರಿ ದರ ಪಡೆದರೆ ಕಾನೂನು ಕ್ರಮ: ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು, ಆ.11: ನಾಳೆಯಿಂದ (ಶನಿವಾರ) ಮಂಗಳವಾರದವರೆಗೆ ಸರಣಿ ರಜೆ ಇರುವುದರಿಂದ ದೂರದ ಊರು ಹಾಗೂ ಪ್ರವಾಸಕ್ಕೆ ತೆರಳುವ ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುವ ಕುರಿತು ದೂರುಗಳು ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಒಟ್ಟಿಗೆ ನಾಲ್ಕು ಸರಕಾರಿ ರಜೆ ಸಿಕ್ಕಿರುವುದರಿಂದ ರಾಜ್ಯದ ಜನತೆ ತಮ್ಮ ಹುಟ್ಟೂರು ಹಾಗೂ ಪ್ರವಾಸಕ್ಕೆ ತೆರಳಲು ಸಜ್ಜಾಗಿದ್ದಾರೆ. ಆದರೆ, ಇದನ್ನೇ ದುರುಪಯೋಗ ಪಡಿಸಿಕೊಳ್ಳಲು ಕೆಲವು ಖಾಸಗಿ ಬಸ್ ಕಂಪೆನಿಗಳು ಸಜ್ಜಾಗಿವೆ ಎಂದು ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಪ್ರಯಾಣಿಕರಿಂದ ದೂರು ಬಂದರೆ ವಂಚಿಸುವ ಖಾಸಗಿ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪರವಾನಿಗೆ ಪಡೆದ ಮಾರ್ಗಗಳಲ್ಲಿ ಸಂಚರಿಸುವ ಖಾಸಗಿ ಬಸ್‌ಗಳ ಮೇಲೆ ನಮಗೆ ನಿಯಂತ್ರಣ ಇರುತ್ತವೆ. ಆದರೆ, ಗುತ್ತಿಗೆ ಆಧಾರದ ಮೇಲೆ ಪ್ರಯಾಣಿಕರನ್ನು ಸಾಗಿಸುವ ಬಸ್‌ಗಳ ಮೇಲೆ ಯಾವುದೇ ನಿಯಂತ್ರಣ ಇರುವುದಿಲ್ಲ. ಹೀಗಾಗಿ ಖಾಸಗಿ ಬಸ್‌ಗಳು ದುಪ್ಪಟ್ಟು ಪ್ರಯಾಣದರ ತೆಗೆದುಕೊಳ್ಳುತ್ತಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ನಿಗಾ ವಹಿಸುವಂತೆ ಆರ್‌ಟಿಒಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
500ಹೆಚ್ಚುವರಿ ಬಸ್ ಸೇವೆ: ನಾಲ್ಕು ದಿನಗಳ ರಜೆ ಇರುವುದರಿಂದ ಕೆಎಸ್ಸಾರ್ಟಿಸಿ ವತಿಯಿಂದ ಪ್ರಯಾಣಿಕರ ಸುರಕ್ಷಿತ ಪ್ರಯಾಣಕ್ಕಾಗಿ ಸುಮಾರು 500ಬಸ್‌ಗಳನ್ನು ಹೆಚ್ಚುವರಿಯಾಗಿ ಓಡಿಸಲಾಗುತ್ತಿದೆ. ಹೀಗಾಗಿ ಪ್ರಯಾಣಿಕರು ಸರಕಾರಿ ಬಸ್‌ಗಳಿಗೆ ಮೊದಲ ಆದ್ಯತೆ ಕೊಡಬೇಕೆಂದು ಅವರು ಹೇಳಿದರು.







