ಪ್ರಧಾನಮಂತ್ರಿ ಫಸಲ್ ಭೀಮ ಯೋಜನೆಯಲ್ಲಿ ಭಾರೀ ವಂಚನೆ: ಜೆಡಿಎಸ್ ನಾಯಕ ಭೋಜೆ ಗೌಡ

ಉಡುಪಿ, ಆ.11: ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಫಸಲ್ ಭೀಮ ಯೋಜನೆಯಲ್ಲಿ ಭಾರೀ ವಂಚನೆ ನಡೆದಿದ್ದು, ಈ ಯೋಜನೆಯನ್ನು ವಹಿಸಿ ಕೊಂಡಿರುವ ಯುನಿರ್ವಸ್ ಸೊಂಪು ಎಂಬ ಖಾಸಗಿ ವಿಮಾ ಕಂಪೆನಿ ಶೇ.90 ರಷ್ಟು ರೈತರಿಗೆ ಬೆಳೆನಷ್ಟ ಪರಿಹಾರವನ್ನು ನೀಡದೆ ಕೋಟ್ಯಂತರ ರೂ. ಲಾಭ ಮಾಡಿಕೊಂಡಿದೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಭೋಜೆ ಗೌಡ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆಯಲ್ಲಿ ರಾಜ್ಯದ ರೈತರಿಂದ 2,500 ಕೋಟಿ ರೂ. ಪ್ರಿಮೀಯಂ ಸಂಗ್ರಹಿಸುವ ಗುರಿಯನ್ನು ಕಂಪೆನಿ ಹೊಂದಿತ್ತು. ಈಗಾಗಲೇ 1,600 ಕೋಟಿ ರೂ. ಪ್ರಿಮೀಯಂ ಸಂದಾಯ ಆಗಿದೆ. ಕಂಪೆನಿಯ ವಂಚನೆ ಅರಿತ ಕೆಲವು ರೈತರು ಪ್ರಿಮೀಯಂ ಪಾವತಿಸಿಲ್ಲ. ಆದರೆ ಪ್ರಿಮೀಯಂ ಪಾವತಿಸಿದ ರೈತರಿಗೂ ಈವರೆಗೆ ಯಾವುದೇ ಬೆಳೆನಷ್ಟ ಪರಿಹಾರವನ್ನು ಒದಗಿಸದೆ ವಂಚನೆ ಮಾಡ ಲಾಗುತ್ತಿದೆ ಎಂದು ದೂರಿದರು.
ದೇಶದಾದ್ಯಂತ ರೈತರಿಂದ 60 ಸಾವಿರ ಕೋಟಿ ರೂ. ಪ್ರಿಮೀಯಂ ಸಂಗ್ರಹಿಸುವ ಗುರಿಯನ್ನು ಕಂಪೆನಿ ಹೊಂದಿತ್ತು. ಇದೀಗ ಈ ಯೋಜನೆಯಿಂದ ಕಂಪೆನಿಗೆ 15 ಸಾವಿರ ಕೋಟಿ ರೂ. ಲಾಭ ಆಗಿದೆ. ಆದುದರಿಂದ ಸರಕಾರ ಈ ಯೋಜನೆಯನ್ನು ಖಾಸಗಿ ಕಂಪೆನಿಗೆ ನೀಡಿರುವುದನ್ನು ಕೂಡಲೇ ರದ್ದು ಪಡಿಸಿ ಸರಕಾರಿ ಸೌಮ್ಯದ ಕಂಪೆನಿಗಳಿಗೆ ನೀಡಬೇಕು ಎಂದು ಅವರು ಒತ್ತಾಯಿಸಿದರು. ಅಲ್ಲದೆ ಈ ವಿಚಾರವನ್ನು ರಾಜ್ಯ ಬಿಜೆಪಿ ನಾಯಕರು ತಮ್ಮ ಹಿತಾಸಕ್ತಿಯನ್ನು ಬದಿಗಿಟ್ಟು, ರಾಜ್ಯಕ್ಕೆ ಆಗಮಿಸುತ್ತಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾರ ಗಮನಕ್ಕೆ ತರಬೇಕು ಎಂದರು.
ರಾಜ್ಯ ಸರಕಾರ ಮಾಡಿರುವ 50,000 ರೂ. ಸಾಲಮನ್ನಾ 2016-17ರದ್ದೊ ಅಥವಾ 2017-18ರದ್ದೋ ಎಂಬುದನ್ನು ಸರಕಾರ ಸ್ಪಷ್ಟಪಡಿ ಸಬೇಕು. ಈವರೆಗೆ ರೈತರ ಬ್ಯಾಂಕ್ ಖಾತೆಗೆ ಈ ಹಣ ಜಮೆ ಆಗಿಲ್ಲ. ಇದು ರೈತರನ್ನು ಕಣ್ಣೋರೆಸುವ ತಂತ್ರ ಆಗಬಾರದು. ಕೂಡಲೇ ಸರಕಾರ ಈ ಸಾಲ ಮನ್ನಾವನ್ನು ಇದೇ ಸಾಲಿನಲ್ಲಿ ಜಮೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಸರಕಾರಿ ನೌಕರರ ವೇತನ ಪರಿಷ್ಕರಣೆಗಾಗಿ ಸರಕಾರ ಏಳನೆ ವೇತನ ಆಯೋಗದ ಸಮಿತಿ ರಚಿಸಿ ಮೂರು ತಿಂಗಳಲ್ಲಿ ವರದಿ ನೀಡುವಂತೆ ತಿಳಿಸಿದೆ. ಆದರೆ ಆರನೇ ವೇತನ ಆಯೋಗದ ವರದಿಯನ್ನು ಸರಕಾರ ಈವರೆಗೆ ಅನುಷ್ಠಾನಕ್ಕೆ ತಂದಿಲ್ಲ. ಸರಕಾರಿ ನೌಕರರ ವೇತನ ಪರಿಷ್ಕರಣೆಗೆ ಇಂತಹ ಆಯೋಗದ ಅಗತ್ಯ ಇಲ್ಲ. ಸರಕಾರ ಕಾಲ ಹರಣ ಮಾಡಲು ಈ ರೀತಿ ನಡೆದು ಕೊಳ್ಳುತ್ತಿದೆ. ಅಡ್ವಕೇಟ್ ಜನರಲ್‌ರ ಸಲಹೆ ಪಡೆದು ಒಂದು ವಾರದಲ್ಲಿ ವೇತನ ಪರಿಷ್ಕರಣೆ ಮಾಡಬಹುದಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ವಾಸುದೇವ ರಾವ್, ಅನಿತಾ ಶೆಟ್ಟಿ, ಶಾಲಿನಿ ಶೆಟ್ಟಿ ಕೆಂಚನೂರು, ಶೇಖರ್ ಕೋಟ್ಯಾನ್, ಜಯಕುಮಾರ್ ಪರ್ಕಳ ಮೊದಲಾದವರು ಉಪಸ್ಥಿತರಿದ್ದರು.







