ಬಡಜನರಿಗೆ ಹಕ್ಕು ಪತ್ರಕ್ಕೆ ಆಗ್ರಹಿಸಿ ಸಿಪಿಐ(ಎಂ) ಪ್ರತಿಭಟನೆ

ತುಮಕೂರು.ಆ.11: ಮೇಳೆಕೋಟೆ, ರಾಜೀವ್ ಗಾಂಧಿನಗರದಲ್ಲಿ ಹಲವು ವರ್ಷಗಳಿಂದ ಸರಕಾರಿ ಜಾಗಗಳಲ್ಲಿ ಮನೆ ನಿರ್ಮಿಸಿ ಕೊಂಡಿರುವ ಬಡಜನರಿಗೆ 94 ಸಿ ಸಿ ಅಡಿಯಲ್ಲಿ ಹಕ್ಕುಪತ್ರಗಳನ್ನು ನೀಡಬೇಕು ಎಂದು ಆಗ್ರಹಿಸಿ ಸಿಪಿಐ(ಎಂ) ಪಕ್ಷದ ವತಿಯಿಂದ ಶಾಸಕರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡಸಲಾಯಿತು.
ನಗರದ ಬಿ.ಜಿ.ಎಸ್ ವೃತ್ತದಿಂದ ಟೌನ್‌ಹಾಲ್‌ನಲ್ಲಿರುವ ಶಾಸಕರ ಕಚೇರಿಗೆ ತೆರಳಿದ ನೂರಾರು ಸಿಪಿಐ(ಎಂ) ಕಾರ್ಯಕರ್ತರು, ಶಾಸಕರ ಗೈರು ಹಾಜರಿಯಲ್ಲಿ ಅವರ ಅಪ್ತ ಕಾರ್ಯದರ್ಶಿ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನಾಕಾರರ ಮನವಿ ಸ್ವಿಕರಿಸಲು ಬಾರದ ಶಾಸಕರು: ಬೆಳಗ್ಗೆ 11 ಗಂಟೆಯಿಂದ ಶಾಸಕರ ಕಛೇರಿ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಶಾಸಕರು ಬರುವವರೆಗೂ ಮನವಿ ನೀಡುವುದಿಲ್ಲ. ಈಗಾಗಲೇ ಹಲವು ಬಾರಿ ಮನವಿಕೊಟ್ಟರು ಸಹ ಯಾವುದೇ ರೀತಿಯ ಸ್ಪಂದನೆ ಸಿಗ್ಪದ ಕಾರಣ ಶಾಸಕರು ಬರಬೇಕು ಎಂದು ಪಟ್ಟು ಹಿಡಿದರು. ಶಾಸಕರು ಮಧ್ಯಾಹ್ನ 1 ಗಂಟೆಯಾದರೂ ಕಚೇರಿಗೆ ಆಗಮಿಸಿದ ಹಿನ್ನಲೆಯಲ್ಲಿ ಅಪ್ತ ಸಹಾಯಕರಾದ ರಾಮಾಂಜೀನಪ್ಪ ಅವರಿಗೆ ಮನವಿ ಸಲ್ಲಿಸಿದರು.
ಈ ಸಚಿದರ್ಭದಲ್ಲಿ ಮಾತನಾಡಿದ ಸಿಪಿಐ(ಎಂ)ನ ರಮೇಶ್, ತುಮಕೂರು ನಗರದ ಪಶ್ಚಿಮ ಭಾಗದಲ್ಲಿ ಬರುವ ರಾಜೀವ್‌ಗಾಂಧಿ ನಗರ ಮತ್ತು ಮೆಳೇಕೋಟೆ ಪ್ರದೇಶದಲ್ಲಿ ಸರಕಾರಿ ಜಾಗಗಳಲ್ಲಿ ಮನೆ ಕಟ್ಟಿಕೊಂಡು ಹಲವು ವರ್ಷಗಳೇ ಕಳೆದಿವೆ. ಈ ಭಾಗದ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಮಾಡುವಂತೆ ಒತ್ತಾಯಿಸಿ ಮಹಾನಗರ ಪಾಲಿಕೆ, ನಗರ ಶಾಸಕರಿಗೆ ಮನವಿ ಸಲ್ಲಿಸಿದ್ದು ಹಕ್ಕುಪತ್ರ ನೀಡುವ ಭರವಸೆ ನೀಡಿದ್ದರು. ಭರವಸೆ ನೀಡಿ ಎರಡು ವರ್ಷ ಕಳೆದರೂ ಇದುವರೆಗೂ ಹಕ್ಕುಪತ್ರಗಳನ್ನು ನೀಡಿಲ್ಲ.ಆದ್ದರಿಂದ ನಗರ ಶಾಸಕರು ಕೂಡಲೇ ಹಕ್ಕುಪತ್ರಗಳನ್ನು ವಿತರಿಸಿ ಸರಳ ಖಾತೆ ಆಂದೋಲನ ದಡಿಯಲ್ಲಿ ಖಾತೆಗಳನ್ನು ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಿಪಿಐ(ಎಂ)ಪಕ್ಷದ ರಾಜ್ಯ ಸಮಿತಿ ಸದಸ್ಯ ಸೈಯದ್‌ಮುಜೀಬ್, ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಬಿ.ಉಮೇಶ್, ನಗರಕಾರ್ಯದರ್ಶಿ ಎಸ್.ರಾಘವೇಂದ್ರ, ನಗರ ಸಮಿತಿ ಸದಸ್ಯರಾದ ಇ.ಶಿವಣ್ಣ, ಶ್ರೀಧರ್, ಶಂಕರಪ್ಪ ಸಿ. ಅಜ್ಜಪ್ಪ, ಎನ್. ರಾಮಚಂದ್ರು, ಮಂಜುನಾಥ್ ಮಾತನಾಡಿದರು.







