ಚಿಕ್ಕಮಗಳೂರು ಒಕ್ಕಲಿಗರ ಸಂಘವು ಮಾದರಿ ಸಂಘವಾಗಬೇಕು: ಆದಿಚುಂಚನಗಿರಿ ಸ್ವಾಮೀಜಿ
ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ನೂತನ ಕಟ್ಟಡದ ಶಂಕುಸ್ಥಾಪನೆ

ಚಿಕ್ಕಮಗಳೂರು, ಆ.11: ರಾಜ್ಯದಲ್ಲಿಯೇ ಚಿಕ್ಕಮಗಳೂರು ಒಕ್ಕಲಿಗರ ಸಂಘವು ಮಾದರಿ ಸಂಘವಾಗಬೇಕು ಎಂದು ಆದಿಚುಂಚನಗಿರಿ ಮಹಾಸಮಸ್ಥಾನ ಮಠದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ಅವರು ಶುಕ್ರವಾರ ನಗರದ ಒಕ್ಕಲಿಗರ ಸಭಾ ಭವನದಲ್ಲಿ ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ನೂತನ ಕಟ್ಟಡ ಶಂಕುಸ್ಥಾಪನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶ್ರೀ ಆದಿಚುಂಚನ ಗಿರಿ ಮಠಕ್ಕೂ ಜಿಲ್ಲೆಗೂ ಅವಿನಾಭವ ಸಂಬಂಧವಿದೆ. 1979ರಲ್ಲಿ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯ ಆರಂಭಿಸಿದಾಗ ಜಿಲ್ಲಾ ಒಕ್ಕಲಿಗರ ಸಂಘದ ಕಟ್ಟಡದಲ್ಲಿ ಪಾಠ ಪ್ರವಚನಕ್ಕೆ ಅವಕಾಶ ನೀಡಿ ಪ್ರೋತ್ಸಹಿದರು. ನಂತರ ಕಾಲೇಜು ಕಟ್ಟಡ ನಿರ್ಮಾಣದ ನಂತರ ಆ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು ಎಂದು ಹೇಳಿದರು. ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘಕ್ಕೆ ರಾಜ್ಯ ಒಕ್ಕಲಿಗರ ಸಂಘದಿಂದ 5 ಲಕ್ಷ ರೂ.ಗಳ ಧನ ಸಹಾಯ ನೀಡಿದ್ದಾರೆ. ಸಂಘದ ಕಟ್ಟಡ ನಿರ್ಮಾಣ ಅತ್ಯಂತ ಶೀಘ್ರದಲ್ಲಿ ಪೂರ್ಣಗೊಳಿಸಿ ಕಟ್ಟಡದ ಉದ್ಘಾಟನೆ ಹಾಗೂ ಒಕ್ಕಲಿಗರ ಸಮುದಾಯದ ಸಮಾವೇಶ ಮಾಡಿ ಸಮುದಾಯದ ಐಕ್ಯತೆಯನ್ನು ಭದ್ರಪಡಿಸಬೇಕು ಎಂದು ಅಭಿಪ್ರಾಯಪಟ್ಟರು.
ಮಠ ಹಾಗೂ ಒಕ್ಕಲಿಗರ ಸಂಘವು ಇನಷ್ಟು ಎತ್ತರಕ್ಕೆ ಬೆಳೆಯಲಿ. ಸಂಘದ ಬೆಳವಣಿಗೆಗೆ ಸಮುದಾಯದವರು ಪ್ರಾಮಾಣಿಕತೆ, ಶ್ರದ್ಧೆಯಿಂದ ಎಲ್ಲರ ಸಹಕಾರ ಪಡೆದುಕೊಳ್ಳಬೇಕು. ಈ ಶಂಕು ಸ್ಥಾಪನ ಕಾರ್ಯಕ್ರಮವು ಒಗ್ಗಟ್ಟು, ಐಕ್ಯತೆ, ಸಾಮಾಜಿಕ ಅಭಿವೃದ್ಧಿ ಕಾರಣವಾಗಬೇಕು. ಮಹಿಳೆಯರು ಬುದ್ಧವಂತರು ಹಾಗೂ ವಿದ್ಯಾವಂತರು ಸಂಘದ ಬೆಳವಣಿಗೆಗೆ ಎಲ್ಲರೂ ಶ್ರಮಿಸಬೇಕು ಎಂದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಡಿ.ಎಲ್. ವಿಜಯ್‌ಕುಮಾರ್ ಮಾತನಾಡಿ, ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘ ತನ್ನದೆಯಾದ ಸ್ವಂತ ಕಟ್ಟಡ ನಿರ್ಮಾಣ ಮಾಡಬೇಕು ಎನ್ನುವುದು ಹಲವು ವರ್ಷಗಳ ಕನಸು ಇಂದು ನನಸಾಗಿದೆ. ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ರಾಜ್ಯ ಸರ್ಕಾರ ಸರ್ಕಾರಿ ಕಾರ್ಯಕ್ರಮವಾಗಿ ಆಚರಣೆ ಮಾಡುತ್ತಿದೆ. ಇದರ ಹಿಂದೆ ಆದಿಚುಂಚನ ಗಿರಿ ಮಠದ ಶ್ರೀ .ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರ ಅಪಾರ ಶ್ರಮವಿದೆ. ಒಕ್ಕಲಿಗರ ಸಮುದಾಯ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲು ಎಲ್ಲರು ಸಹಕರಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬ್ಯಾರವಳ್ಳಿ ನಾಗರಾಜ್, ಐಎಎಸ್ ಅಧಿಕಾರಿ ರಾಜಕುಮಾರ್ ಖತ್ರಿ, ನಗರಸಭೆ ಅಧ್ಯಕ್ಷೆ ಕವಿತಾ ಶೇಖರ್, ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಹನೀಫ್, ಎಐಟಿ ಕಾಲೇಜ್ ಪ್ರಾಂಶುಪಾಲ ಸುಬ್ಬರಾಯ, ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್. ಬೋಜೇಗೌಡ, ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಉಪಾಧ್ಯಕ್ಷೆ ವಸಂತಕುಮಾರಿ, ಗೌರವ ಕಾರ್ಯದರ್ಶಿ ರೀನಾ ಸುಜೇಂದ್ರ ಮತ್ತಿತರರಿದ್ದರು.







