ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಜಡೇಜಾ ಸೇರಿದಂತೆ ಮೂವರಿಗೆ ಜೀವಾವಧಿ ಶಿಕ್ಷೆ

ಅಹ್ಮದಾಬಾದ್,ಆ.11: 2004,ಫೆ.8ರಂದು ರಾಜಕೋಟ್‌ನಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ರಾಜಕೋಟ್-ಗೊಂಡಾಲ್‌ನ ಬಿಜೆಪಿ ಶಾಸಕ ಜಯರಾಜ ಸಿಂಹ್ ಜಡೇಜಾ ಮತ್ತು ಇತರ ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಗುಜರಾತ್ ಉಚ್ಚ ನ್ಯಾಯಾಲಯವು ಶುಕ್ರವಾರ ಆದೇಶಿಸಿದೆ.
ಜಡೇಜಾ, ಅವರ ಸಹಚರರಾದ ಅಮರಜಿತ್ ಸಿಂಹ್ ಜಡೇಜಾ ಮತ್ತು 19 ವರ್ಷಕ್ಕಿಂತ ಕೆಳಗಿನ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಮಹೇಂದ್ರಸಿಂಹ್ ರಾಣಾ ಅವರಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ ನ್ಯಾಯಮೂರ್ತಿಗಳಾದ ಅಕಿಲ್ ಕುರೇಶಿ ಮತ್ತು ಬೀರೇನ್ ವೈಷ್ಣವ ಅವರ ವಿಭಾಗೀಯ ಪೀಠವು, ಸದ್ಯ ಜಾಮೀನಿನಲ್ಲಿ ಹೊರಗಿರುವ ಅವರಿಗೆ ಸೆ.30ರೊಳಗೆ ಜೈಲು ಅಧಿಕಾರಿಗಳೆದುರು ಶರಣಾಗುವಂತೆ ನಿರ್ದೇಶ ನೀಡಿತು.
ಭೂ ವಿವಾದಕ್ಕೆ ಸಂಬಂಧಿಸಿದಂತೆ ನಿಲೇಶ ರೈಯಾನಿ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದ್ದು, ಈ ಪ್ರಕರಣದಲ್ಲಿ ಜಡೇಜಾ ಮತ್ತು ಇತರ 15 ಜನರ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು.
ಇದಕ್ಕೂ ಮುನ್ನ 2010ರಲ್ಲಿ ರಾಜಕೋಟ್‌ನ ತ್ವರಿತ ಗತಿ ನ್ಯಾಯಾಲಯವು ಜಡೇಜಾರನ್ನು ಬಿಡುಗಡೆಗೊಳಿಸಿತ್ತು. 16 ಆರೋಪಿಗಳ ಪೈಕಿ ಜಡೇಜಾರ ಸಹಚರ ಸಮೀರ್ ಪಠಾಣ್ ಎಂಬಾತ ರೈಯಾನಿ ಹತ್ಯೆಗೈದಿದ್ದ ಎಂಬ ತೀರ್ಮಾನಕ್ಕೆ ಬಂದಿದ್ದ ಅದು ಆತನಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು.
ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಪಠಾಣ್ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇ ರಿದ್ದರೆ, ಜಡೇಜಾ ಸೇರಿದಂತೆ ಇತರ 15 ಆರೋಪಿಗಳನ್ನು ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ರಾಜ್ಯ ಸರಕಾರವು ಮೇಲ್ಮನವಿ ಸಲ್ಲಿಸಿತ್ತು.
ರೈಯಾನಿಯತ್ತ ಜಡೇಜಾ ಗುಂಡು ಹಾರಿಸಿದ್ದನ್ನು ತಾನು ನೋಡಿದ್ದೆ ಮತ್ತು ಅಮರಜಿತ್ ಸಿಂಹ್ ಜಡೇಜಾ ಹಾಗೂ ಮಹೇಂದ್ರಸಿಂಹ್ ರಾಣಾ ಅವರ ಜೊತೆಯಲ್ಲಿದ್ದರು ಎಂದು ಪ್ರತ್ಯಕ್ಷದರ್ಶಿ ಹಾಗೂ ಮುಖ್ಯಸಾಕ್ಷಿ ರಾಮಜಿ ಮಕ್ವಾನಾರ ಹೇಳಿಕೆಯನ್ನು ಪರಿಗಣಿಸಿದ ಉಚ್ಚ ನ್ಯಾಯಾಲಯವು ಪಠಾಣ್‌ನನ್ನು ದೋಷಮುಕ್ತ ಗೊಳಿಸಿ, ಜಡೇಜಾ ಮತ್ತು ಇತರ ಇಬ್ಬರನ್ನು ದೋಷಿಗಳೆಂದು ತೀರ್ಮಾನಿಸಿತು. ರೈಯಾನಿ ಮಕ್ವಾನಾ ಸೇರಿದಂತೆ ಇಬ್ಬರು ಸ್ನೇಹಿತರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಕೊಲೆ ನಡೆದಿತ್ತು.







