ಅಂಗದಾನದ ಕುರಿತು ಜಾಗೃತಿ ಅಗತ್ಯ: ಪ್ರವೀಣ್ ಸೂದ್

ಬೆಂಗಳೂರು, ಆ.11: ನಮ್ಮ ಸಮಾಜದಲ್ಲಿ ಅಂಗದಾನದ ಕುರಿತು ತಪ್ಪು ಅಭಿಪ್ರಾಯಗಳಿವೆ. ಅದನ್ನು ಹೋಗಲಾಡಿಸುವ ಮೂಲಕ ಜಾಗೃತಿ ಮೂಡಿಸುವ ತುರ್ತು ಅಗತ್ಯವಿದೆ ಎಂದು ಪೊಲೀಸ್ ಹೆಚ್ಚುವರಿ ಪ್ರಧಾನ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅಭಿಪ್ರಾಯಿಸಿದ್ದಾರೆ.
ದೇಶದಲ್ಲಿ ಅಂಗದಾನದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಮಣಿಪಾಲ್ ಆಸ್ಪತ್ರೆ ಸ್ಪ್ರೆಡಿಂಗ್ ಹೋಪ್ ಫೌಂಡೇಷನ್‌ನೊಂದಿಗೆ ಪಾಲುದಾರಿಕೆ ಮಾಡಿಕೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಂಗದಾನ ಮಾಡುವವರನ್ನು ಪ್ರೋತ್ಸಾಹಿಸುವ ಮೂಲಕ ಮತ್ತೊಬ್ಬರನ್ನು ಉತ್ತೇಜಿಸಬೇಕಾಗಿದೆ ಎಂದು ತಿಳಿಸಿದರು.
ಅಂಗದಾನದ ಕುರಿತು ಪ್ರತಿಯೊಬ್ಬರು ಭಾಗವಹಿಸಬೇಕು. ಈ ಕುರಿತು ಜನ ಸಾಮಾನ್ಯರಿಗೆ ತಿಳುವಳಿಕೆ ಮೂಡಿಸಬೇಕಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿರುವವರು, ಸಮಾಜ ಸೇವಕರು ಹಾಗೂ ಗಣ್ಯರು ಅಂಗದಾನದ ಕುರಿತು ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕಾಗಿದೆ ಎಂದು ಅವರು ಹೇಳಿದರು.
ನಟಿ ಶರ್ಮಿಲಾ ಮಾಂಡ್ರೆ ಮಾತನಾಡಿ, ಪ್ರತಿವರ್ಷ ಅಂಗದಾನದ ಕೊರತೆಯಿಂದಾಗಿ ಲಕ್ಷಾಂತರ ಮಂದಿ ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಅಂಗದಾನ ಮಾಡುವುದು ಒಂದು ಮಹತ್ಕಾರ್ಯ ಹಾಗೂ ಜವಾಬ್ದಾರಿ ಎಂದು ಜನತೆಗೆ ತಿಳಿಸಬೇಕಾಗಿದೆ. ಜನಸಾಮಾನ್ಯರಲ್ಲಿರುವ ಕೆಲವೊಂದು ಮಡಿವಂತಿಕೆಯನ್ನು ಹೋಗಲಾಡಿಸಿದರೆ ಅಂಗದಾನ ಅಭಿಯಾನವು ಯಶಸ್ವಿಯಾಗಲಿದೆ ಎಂದು ತಿಳಿಸಿದರು.
ಮಣಿಪಾಲ್ ಆಸ್ಪತ್ರೆಯ ಅಧ್ಯಕ್ಷ ಡಾ.ಎಚ್.ಸುದರ್ಶನ್ ಬಲ್ಲಾಳ್ ಮಾತನಾಡಿ, ಭಾರತದಲ್ಲಿ ಆರೋಗ್ಯ ಶುಶ್ರೂಷೆಯ ಆದ್ಯತೆಗಳಲ್ಲಿ ಅಂಗದಾನವು ಒಂದಾಗಿದೆ. ಪ್ರತಿ ವರ್ಷ ಅಂಗಗಳ ಅಲಭ್ಯತೆಯಿಂದ 5ಲಕ್ಷಕ್ಕೂ ಹೆಚ್ಚು ಜನರು ಮೃತಪಡುತ್ತಾರೆ. ಪ್ರಸ್ತುತ ಭಾರತದಲ್ಲಿ 10ಲಕ್ಷ ಜನರಿಗೆ 0.5 ದಾನಿಗಳಿದ್ದಾರೆ. ಈ ಸಂಖ್ಯೆಯನ್ನು ಹೆಚ್ಚಿಸಬೇಕಾಗಿದೆ ಎಂದು ತಿಳಿಸಿದರು.
ಒಬ್ಬ ದಾನಿ ಮಾಡುವ ಅಂಗದಾನದ ಮೂಲಕ 8 ಜೀವಗಳನ್ನು ಉಳಿಸಬಹುದು. ಅಲ್ಲದೆ, ಅಂಗಾಂಶ ದಾನದಿಂದ 50ಜೀವನಗಳನ್ನು ಉಳಿಸಬಹುದು. ಅಂಗ ಕಸಿಯಿಂದ ಅದನ್ನು ಸ್ವೀಕರಿಸುವವರ ಜೀವನದ ಗುಣಮಟ್ಟ ಗಮನಾರ್ಹವಾಗಿ ಸುಧಾರಿಸಬಹುದಲ್ಲದೆ, ಅವರಿಗೆ ಬದುಕಲು ಮತ್ತೊಂದು ಅವಕಾಶ ನೀಡಿದಂತಾಗುತ್ತದೆ ಎಂದು ಅವರು ಹೇಳಿದರು.
ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಪ್ರತಿ ವರ್ಷ ಸುಮಾರು 5 ಲಕ್ಷ ಜನರು ಅಂಗ ದಾನಕ್ಕಾಗಿ ಕಾಯುತ್ತಲೇ ಮೃತಪಡುತ್ತಿದ್ದಾರೆ. ಅಂಗ ದಾನಕ್ಕಾಗಿ ಕಾಯುತ್ತಿರುವವರು ಮತ್ತು ಲಭ್ಯವಿರುವ ಅಂಗಗಳ ನಡುವಿನ ಸಾಕಷ್ಟು ಅಂತರವಿದೆ. ಪ್ರತಿ ವರ್ಷ ಸುಮಾರು ಒಂದು ಲಕ್ಷ ಜನರು ಪಿತ್ತಜನಕಾಂಗ ರೋಗದಿಂದ ಮೃತಪಡುತ್ತಾರೆ. ಸುಮಾರು 2,20,000 ಜನರು ಮೂತ್ರಪಿಂಡ ಕಸಿಗಾಗಿ ಕಾಯುತ್ತಿದ್ದಾರೆ. ಸುಮಾರು 10 ಲಕ್ಷ ಜನರು ಕಾರ್ನಿಯಾ ಕಸಿಗಾಗಿ ಕಾಯುತ್ತಿದ್ದಾರೆ, 5 ಲಕ್ಷ ಜನರು ಹೃದಯದ ಕಸಿಗಾಗಿ ಹಾಗೂ 20,000 ಜನರು ಶ್ವಾಸಕೋಶದ ಕಸಿ ಅಗತ್ಯ ಹೊಂದಿರುತ್ತಾರೆ ಎಂದು ಅವರು ಮಾಹಿತಿ ನೀಡಿದರು.







